
ಬೆಂಗಳೂರು: ರಾಜ್ಯದ 17,800 ಅಂಗನವಾಡಿಗಳನ್ನು ಶೀಘ್ರದಲ್ಲೇ ಸರ್ಕಾರಿ ಮಾಂಟೆಸ್ಸರಿ'ಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾನುವಾರ ಹೇಳಿದರು.
ಲಕ್ಕವಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ, ಅಂಗನವಾಡಿಗಳನ್ನು ಸರ್ಕಾರಿ ಮಾಂಟೆಸ್ಸರಿ'ಗಳಾಗಿ ಮೇಲ್ದರ್ಜೆಗೇರಿಸುವ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಇದಲ್ಲದೆ, ಕೇಂದ್ರ ಸರ್ಕಾರವು ಈ ಉಪಕ್ರಮವನ್ನು ಶ್ಲಾಘಿಸಿದೆ ಮತ್ತು ಆರ್ಥಿಕ ಬೆಂಬಲವನ್ನು ನೀಡಿದೆ ಎಂದು ಹೇಳಿದರು.
ಪೂರ್ವ ಪ್ರಾಥಮಿಕ ತರಗತಿಗಳ ಆರಂಭಕ್ಕೆ ಕೆಲವೊಂದು ಮಾರ್ಗಸೂಚಿಗಳನ್ನು ಸಿದ್ಧಪಡಿಸಿಕೊಂಡಿದ್ದು, ಎರಡು ಕೊಠಡಿ, ಶೌಚಾಲಯ ವ್ಯವಸ್ಥೆ ಇರಬೇಕು. ಇಂತಹ ವ್ಯವಸ್ಥೆ ಹೊಂದಿರುವ 17,800 ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಳ್ಳಲಿವೆ. ಈ ಅಂಗನವಾಡಿಗಳಲ್ಲಿನ ಶಿಕ್ಷಕರು ತಮ್ಮ ಶೈಕ್ಷಣಿಕ ಅರ್ಹತೆಯಾಗಿ ಕನಿಷ್ಠ ಪಿಯುಸಿ-II ಅಥವಾ ಪದವಿಯನ್ನು ಪಡೆದಿರಬೇಕು. ಪ್ರಾಯೋಗಿಕ ಯೋಜನೆಯಾಗಿ ಈಗಾಗಲೇ ಬೆಂಗಳೂರಿನಲ್ಲಿ 250 ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿದ್ದೇವೆ. ಉಳಿದ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಈ ಉಪಕ್ರಮಕ್ಕೆ ಹಣವನ್ನು ಸಕ್ಷಮ್ ಅಂಗನವಾಡಿ ಯೋಜನೆಯಡಿ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ಈ ಉದ್ದೇಶಕ್ಕಾಗಿ ಒಂದು ವಾರದಲ್ಲಿ 170 ಕೋಟಿ ರೂ. ನೀಡಲಿದೆ ಎಂದರು.
ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ 2 ಸಾವಿರ ರೂ.ಗಳನ್ನು ವಿತರಿಸಲು ವಿಳಂಬವಾಗುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಸರ್ಕಾರವು ಯೋಜನೆಗೆ ಮಾಸಿಕ 3,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತಿದೆ. ಫಲಾನುಭವಿಗಳಿಗೆ ಹಣವನ್ನು ವಿತರಿಸಲು ಬ್ಯಾಂಕ್‌ಗಳಿಗೆ ಕನಿಷ್ಠ 15 ದಿನಗಳು ಬೇಕಾಗುತ್ತದೆ. ಹಣ ಜಮಾ ಆಗುವ ಹೊತ್ತಿಗೆ ಮುಂದಿನ ತಿಂಗಳು ಸಮೀಪಿಸುತ್ತಿದೆ ಎಂದರು. ಇದೇ ವೇಳೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಸರಕಾರ ಮುಂದುವರಿಸಲಿದೆ ಎಂದು ಭರವಸೆ ನೀಡಿದರು.
ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಕೊಚ್ಚಿ ಹೋಗಿರುವ ಕುರಿತು ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಸಿಎಂ ಹಾಗೂ ಡಿಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ಹೇಳಿದರು.
ಅಣೆಕಟ್ಟಿನ ನಿರ್ವಹಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, "ಕರ್ತವ್ಯ ಲೋಪವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ವರ್ಷ ಬರಗಾಲವಿತ್ತು, ಆದರೆ, ಈ ವರ್ಷ ಹೆಚ್ಚಿನ ಮಳೆಯಾಗಿದ್ದು, ಅಣೆಕಟ್ಟುಗಳು ತುಂಬಿವೆ. ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅಗತ್ಯವಿದ್ದರೆ ಅಣೆಕಟ್ಟುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
Advertisement