ಬೆಂಗಳೂರು: ಈ ವರ್ಷ ಮುಂಗಾರು ಮಳೆ ಆರಂಭವಾದ ನಂತರ ಭಾರೀ ವರ್ಷಧಾರೆಯನ್ನು ಇಂದು ಕಂಡ ರಾಜಧಾನಿ ಬೆಂಗಳೂರು ನಿನ್ನೆ ಭಾನುವಾರ ತಡರಾತ್ರಿಯಿಂದ ಇಂದು ಸೋಮವಾರ ಬೆಳಗಿನ ಜಾವದವರೆಗೆ 52 ಮಿ.ಮೀ ಮಳೆಯಾಗಿದ್ದು, ನಗರ ನಿವಾಸಿಗಳನ್ನು ಆತಂಕಕ್ಕೀಡುಮಾಡಿದೆ.
ಕಳೆದ ವರ್ಷದಂತೆ ಈ ಬಾರಿ ಕೂಡ ಮಹದೇವಪುರ ವಲಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತರ ಅನೇಕ ಕಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ.
ಇಂದು ಬೆಳಗಿನ ಜಾವ ಮಳೆಯಲ್ಲೇ ವಾಹನ ಸವಾರರು ತಮ್ಮ ಕಚೇರಿ ಹಾಗೂ ದಿನನಿತ್ಯದ ಕೆಲಸದ ಸ್ಥಳಗಳಿಗೆ ತೆರಳಿದರು. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು. ಶಾಲಾ ವಾಹನಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿಕೊಂಡವು. ಐಟಿ ವಲಯದ ವರ್ತೂರು ಮತ್ತು ಬೆಳ್ಳಂದೂರಿನಲ್ಲಿ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ಕಚೇರಿಗೆ ತೆರಳುವವರು ಟ್ರಾಫಿಕ್ ಸಮಸ್ಯೆ ಎದುರಿಸಿದರು.
ಹೆಬ್ಬಾಳ ಮೇಲ್ಸೇತುವೆ ಹಾಗೂ ಎಸ್ಟೀಮ್ ಮಾಲ್ ಕಡೆಯಿಂದ ಮೇಖ್ರಿ ವೃತ್ತದತ್ತ ಸಾಗುವ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿತು. ವೀರಸಂದ್ರ ಬಳಿ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯಿಂದ ಹೊರಡುವ ವಾಹನಗಳು ಟ್ರಾಫಿಕ್‌ನಲ್ಲಿ ಸಿಲುಕಿಹಾಕಿಕೊಂಡವು. ಈ ರಸ್ತೆಯಲ್ಲಿ ಸಂಚರಿಸುವ ಜನರು ಬೇರೆ ಮಾರ್ಗಗಳತ್ತ ಮುಖ ಮಾಡಿದರು.
ಬಿಬಿಎಂಪಿ ವ್ಯಾಪ್ತಿಯ ಹಲವೆಡೆ ಮಳೆ ನೀರು ನಿಂತಿದ್ದರಿಂದ ಸಮಸ್ಯೆ ಉಂಟಾಗಿದೆ. ಹೆಬ್ಬಾಳ, ಮೇಖ್ರಿ ವೃತ್ತ, ನಾಗವಾರದಲ್ಲಿ ಮಳೆ ನೀರು ಚರಂಡಿಯಲ್ಲಿ ಹರಿಯುವಂತೆ ಪೊಲೀಸರು, ಬಿಬಿಎಂಪಿಯ ವಿಪತ್ತು ನಿರ್ವಹಣಾ ಪಡೆ ಕಸಕಡ್ಡಿಗಳನ್ನು ತೆಗೆಯುವಲ್ಲಿ ನಿರತರಾದರು.
ಎಷ್ಟು ಮಳೆಯಾಗಿದೆ?
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಕೊಡಿಗೇಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 61.5 ಮಿ.ಮೀ ಮಳೆಯಾಗಿದೆ. ಅದೇ ರೀತಿ ವಿವಿ ಪುರದಲ್ಲಿ 57.5, ವಿದ್ಯಾಪೀಠದಲ್ಲಿ 56, ನಾಯಂಡಹಳ್ಳಿಯಲ್ಲಿ 55, ಹಗದೂರಿನಲ್ಲಿ 54, ರಾಜರಾಜೇಶ್ವರಿ ನಗರದಲ್ಲಿ 53 ಮಿ.ಮೀ.
ಎಚ್ ಎಸ್ ಆರ್ ಲೇಔಟ್ ನಲ್ಲಿ ವಿ.ನಾಗೇನಹಳ್ಳಿ 50.5 ಮಿ.ಮೀ, ರಾಜರಾಜೇಶ್ವರಿನಗರ (2)50.5 ಮಿ.ಮೀ, ಪುಲಕೇಶಿನಗರ 49.5 ಮಿ.ಮೀ, ಯಲಹಂಕ 49 ಮಿ.ಮೀ, ಅರಕೆರೆ 48.5 ಮಿ.ಮೀ, ದೊಡ್ಡನೆಕ್ಕುಂದಿ 4 5ಮಿ.ಮೀ, 44 ಮಿ.ಮೀ ಮಳೆ ದಾಖಲಾಗಿದೆ.
Advertisement