
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ವಾರದ ಆರಂಭ ದಿನವಾದ ಸೋಮವಾರ ನಸುಕಿನ ಜಾವವೇ ಭಾರೀ ಮಳೆಯ ದರ್ಶನವಾಗಿದೆ. ಸತತವಾಗಿ ಸುರಿದ ಮಳೆಯಿಂದಾಗಿ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ.
ರಾಜಧಾನಿಯ ಹಲವು ರಸ್ತೆಗಳು ಜಲಾವೃತವಾಗಿದ್ದು, ಇನ್ನು ಕೆಲವು ರಸ್ತೆಗಳು ಕೆಸರುಮಯವಾಗಿ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು. ಬೆಳಗ್ಗೆ ಕಚೇರಿಗೆ ಹೋಗುವವರು, ಶಾಲೆ-ಕಾಲೇಜುಗಳಿಗೆ ಹೋಗುವವರಿಗೆ ತೊಂದರೆಯಾಗಿದೆ. ನೀರು ನಿಂತು ಅಂಡರ್ಪಾಸ್ಗಳು ಜಲಾವೃತಗೊಂಡಿವೆ. ಚಿಕ್ಕಪೇಟೆ ಮೆಟ್ರೋ ನಿಲ್ದಾಣ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
ಬೆಂಗಳೂರಿನ ಯಾವ ಯಾವ ಪ್ರದೇಶಗಳಲ್ಲಿ ಸಮಸ್ಯೆಯಾಗಿದೆ, ಜಲಾವೃತವಾಗಿದೆ, ಪ್ರಯಾಣಿಕರು ಯಾವ ಮಾರ್ಗದಲ್ಲಿ ಸಂಚಾರ ಮಾಡದಿದ್ದರೆ ಉತ್ತಮ, ಯಾವ ಮಾರ್ಗದಲ್ಲಿ ಸಂಚರಿಸಬೇಕು ಎಂಬ ಮಾಹಿತಿಯನ್ನು ನಗರ ಸಂಚಾರ ಪೊಲೀಸರು ನೀಡುತ್ತಿದ್ದಾರೆ.
ಹಲವು ಭಾಗಗಳಲ್ಲಿ ಮಧ್ಯರಾತ್ರಿಯೇ ಮಳೆ ಆರಂಭವಾಗಿದೆ. ಮೆಜೆಸ್ಟಿಕ್, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಕೋರಮಂಗಲ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್ ಸರ್ಕಲ್, ಟೌನ್ಹಾಲ್, ಕೆ.ಆರ್.ಮಾರ್ಕೆಟ್, ತ್ಯಾಗರಾಜನಗರ, ಜಯನಗರ, ಹನುಮಂತನಗರ, ಶ್ರೀನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ, ಶಿವಾನಂದ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಯಲಹಂಕ, ಕೆ.ಆರ್.ಪುರಂ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ರಸ್ತೆಗಳು ಜಲಾವೃತಗೊಂಡಿವೆ.
ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಒಕಳಿಪುರಂನ ಅಂಡರ್ಪಾಸ್ಗೆ ನೀರು ನುಗ್ಗಿ, ವಾಹನ ಸವಾರರು ತಡರಾತ್ರಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ನೀರು ನಿಂತದ್ದ ರಸ್ತೆಯಲ್ಲಿಯೇ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ರಸ್ತೆಯಲ್ಲೇ ನಿಂತಿದೆ. ಕೆ.ಆರ್.ಮಾರ್ಕೆಟ್ನ ರಸ್ತೆಗಳೂ ಕೆಸರುಮಯವಾಗಿದ್ದು, ವ್ಯಾಪಾರ ವಹಿವಾಟಿಗೆ ತೊಂದರೆ ಎದುರಾಗಿದೆ. ಕೆ ಆರ್ ಮಾರ್ಕೆಟ್ ನಲ್ಲಿ ನಸುಕಿನ ಜಾವ ಹೂವು ತಂದು ಮಾರಾಟಕ್ಕೆ ಇಟ್ಟಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆಯೂ ನಡೆದಿದೆ.
ಅನೇಕ ಸ್ಥಳಗಳಲ್ಲಿ ರಸ್ತೆಯಲ್ಲಿರುವ ನೀರನ್ನು ಹೊರಹಾಕಿ ಜನರ ಸುಗಮ ಸಂಚಾರಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ತಂಡ ಕಾರ್ಯಾಚರಣೆಗಿಳಿದಿದೆ.
Advertisement