
ಬೆಂಗಳೂರು: ವೋಲ್ವೋ ಬಸ್‌ನ ಚಾಲಕ ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬನಿಗೆ ಗಂಭೀರ ಗಾಯಗಳಾಗಿದ್ದು, ದ್ವಿಚಕ್ರ ವಾಹನ ಸೇರಿದಂತೆ ಆರು ವಾಹನಗಳು ಜಖಂಗೊಂಡಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಯಲ್ಲಿ ನಡೆದಿದೆ. ಅದೃಷ್ಟವಶಾತ್ ದುರ್ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಹೆಬ್ಬಾಳ ಮೇಲ್ಸೇತುವೆಯಲ್ಲಿ ನಿನ್ನೆ ಬೆಳಗ್ಗೆ 9.47ರಿಂದ 9.50ರ ನಡುವೆ ಈ ಘಟನೆ ನಡೆದಿದ್ದು, ವೋಲ್ವೋ ಬಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತು ಎಚ್‌ಎಸ್‌ಆರ್ ಲೇಔಟ್ ಕಡೆಗೆ ಹೋಗುತ್ತಿತ್ತು.
ಅಪಘಾತದ 2.20 ನಿಮಿಷಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಚಾಲಕನಿಗೆ ಅಪಘಾತದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಸ್ಪಷ್ಟವಾಗಿ ಕಾಣಬಹುದು. ಚಾಲಕ ಫ್ಲೈಓವರ್‌ನಲ್ಲಿ ಪೀಕ್ ಅವರ್ ಟ್ರಾಫಿಕ್‌ನಲ್ಲಿ ನಿಧಾನವಾಗಿ ಚಾಲನೆ ಮಾಡುತ್ತಿದ್ದರು.
ಅಪಘಾತ ಸಂಭವಿಸಿದ ತಕ್ಷಣ ಚಾಲಕ ಮತ್ತು ಕಂಡಕ್ಟರ್ ಅಪಘಾತ ಸ್ಥಳದಲ್ಲಿಯೇ ಇದ್ದು ವಾಹನ ಸವಾರರ ಸ್ಥಿತಿಯನ್ನು ಪರಿಶೀಲಿಸಿದರು. ಹಾನಿಗೀಡಾದ ವಾಹನಗಳಲ್ಲಿ ಕಾರು ಕೂಡ ಸೇರಿದೆ. ಅಪಘಾತಕ್ಕೆ ನಿಖರ ಕಾರಣಗಳನ್ನು ಪತ್ತೆ ಮಾಡಲಾಗುತ್ತಿದೆ.
ಬೆಂಗಳೂರು ಉತ್ತರ ವಿಭಾಗದ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement