ಬೆಂಗಳೂರು: ಇಡೀ ದೇಶ 78ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಐಟಿ ಸಿಟಿ ಬೆಂಗಳೂರಿನಲ್ಲಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ, ಭದ್ರತೆ ಯಾವ ರೀತಿ ಇರಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಾಹಿತಿ ನೀಡಿದರು.
ನಗರದ ಮಾಣಿಕ್ ಶಾ ಪರೇಡ್ ಗ್ರೌಂಡ್ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಿಹರ್ಸಲ್ ಕಾರ್ಯಕ್ರಮ ಮಾಡಲಾಗಿದೆ. ಕಾರ್ಯಕ್ರಮ ಹಿನ್ನೆಲೆ 15ದಿನಗಳಿಂದ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಪರೇಡ್ ಮೈದಾನದ ಸುತ್ತ ಕಣ್ಗಾವಲು: ಸ್ವಾತಂತ್ರ್ಯ ದಿನ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 10 ಡಿಸಿಪಿ, 17 ಎಸಿಪಿ, 42 ಇನ್ಸ್ಪೆಕ್ಟರ್, 112 ಪಿಎಸ್ಐ, 62 ಎಎಸ್ಐ, 511 ಕಾನ್ಸ್ಟೇಬಲ್ಗಳು, 72 ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದೆ. 129 ಮಂದಿ ಮಫ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸಿಸಿಟಿವಿ ಪರಿಶೀಲನೆ ಮಾಡಲು 27 ಸಿಬ್ಬಂದಿಯ ನೇಮಕ ಮಾಡಲಾಗಿದೆ. ಹೆಚ್ಚುವರಿಯಾಗಿ ಹತ್ತು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಸಂಚಾರ ನಿರ್ವಹಣೆಗೆ ಪೊಲೀಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದರು.
3 ಜನ ಡಿಸಿಪಿ, 6 ಜನ ಎಸಿಪಿ, 19 ಜನ ಇನ್ಸ್ಪೆಕ್ಟರ್, 32 ಪಿಎಸ್ಐ, 111 ಎಎಸ್ಐ ಹಾಗೂ 430 ಕಾನ್ಸಟೇಬಲ್ಗಳು ಸೇರಿದಂತೆ ನೂರಾರು ಸಿಬ್ಬಂದಿಯನ್ನು ಮೈದಾನದ ಸುತ್ತಮುತ್ತ ಟ್ರಾಫಿಕ್ ಕಂಟ್ರೋಲ್‌ಗೆ ನೇಮಕ ಮಾಡಲಾಗಿದೆ. ಪ್ರತಿ ಗೇಟ್ನಲ್ಲೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದರು.
ಕೆಲವು ವಸ್ತುಗಳಿಗೆ ನಿಷೇಧ: ಮಾಣಿಕ್ ಶಾ ಮೈದಾನದೊಳಗೆ ಹೋಗುವವರು ಸಿಗರೇಟ್, ಬೆಂಕಿಪೊಟ್ಟಣ, ಕಪ್ಪು ಕರ ವಸ್ತುಗಳು, ಚೂಪಾದ ವಸ್ತುಗಳು, ಕ್ಯಾಮರಾಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಮೈದಾನದ ಒಳಗೆ ಬಿಡುವ ಮುನ್ನ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತದೆ ಎಂದರು.
ಮೈದಾನದ ಸಮೀಪವಿರುವ ಬಹುಮಹಡಿ ಕಟ್ಟಡಗಳು ಮತ್ತು ಕಾಮಗಾರಿ ಸ್ಥಳಗಳನ್ನು ಪರಿಶೀಲಿಸಲಾಗಿದೆ. ಜತೆಗೆ ನಗರದ 108 ಪೊಲೀಸ್ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯ ರೈಲ್ವೆ ನಿಲ್ದಾಣ, ಹೊಟೇಲ್ ಸೇರಿದಂತೆ ಎಲ್ಲೆಡೆ ತಪಾಸಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ವಾಹನ ನಿಲುಗಡೆ: ವಾಹನಗಳ ನಿಲುಗಡೆಗೆ ನಾಲ್ಕು ಬಣ್ಣದ ಪಾಸುಗಳನ್ನು ಮಾಡಲಾಗಿದ್ದು, ಇವುಗಳಲ್ಲಿ ಮೈದಾನದೊಳಗೆ ಪ್ರವೇಶಿಸಲು ಗೇಟ್ ಮತ್ತು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂದು ತಿಳಿಸಲಾಗಿದೆ.
ಮೈದಾನದ ಸುತ್ತ ಯಾವುದೇ ವಾಹನ ನಿಲುಗಡೆ ಮಾಡುವಂತಿಲ್ಲ, ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ್ ರಸ್ತೆ ಜಂಕ್ಷನ್‌ವರೆಗೆ ಬೆಳಗ್ಗೆ 8 ರಿಂದ 11 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಪಾರ್ಕಿಂಗ್ ನಿಷೇಧಿಸಲಾಗಿರುವ ರಸ್ತೆಗಳು:
* ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್ ನಿಲ್ದಾಣದವರೆಗೆ.
* ಕಬ್ಬನ್ ರಸ್ತೆ, ಸಿಟಿಒ ವೃತ್ತ, ಕೆ.ಆರ್.ರಸ್ತೆ.
* ಎಂಜಿ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ.
10 ಕೆ.ಎಸ್.ಆರ್.ಪಿ., ಸಿ.ಎ.ಆರ್. ಸ್ಕ್ವಾಡ್‌ಗಳು, 2- ಅಗ್ನಿಶಾಮಕ ಇಂಜಿನ್‌ಗಳು, 2 ಆಂಬ್ಯುಲೆನ್ಸ್ ವಾಹನಗಳು ಮತ್ತು 1 ಕ್ವಿಕ್ ಟಾಸ್ಕ್ ಫೋರ್ಸ್ (ಕ್ಯೂಆರ್‌ಟಿ) ಗರುಡ ಫೋರ್ಸ್ ಅನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮೈದಾನದ ಸುತ್ತಲಿನ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಲು 100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
Advertisement