ಮಂಡ್ಯ: ತುಂಗಭದ್ರಾ ಅಣೆಕಟ್ಟೆಯಲ್ಲಿ ಕ್ರೆಸ್ಟ್ ಗೇಟ್ ಕೊಚ್ಚಿಹೋದ ಘಟನೆ ಬೆನ್ನಲ್ಲೇ ಕರ್ನಾಟಕದ ಹಳೆಯ ಜಲಾಶಯಗಳಲ್ಲಿ ಒಂದಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯ ಕುರಿತು ಜನರಲ್ಲ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಕೆಆರ್'ಎಸ್ ಜಲಾಶಯ ಸುಭದ್ರವಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಸುದ್ದಿಗಾರರೊಂದಿಗೆ ಮತನಾಡಿದ ಸಚಿವ ಚಲುವರಾಯಸ್ವಾಮಿಯವರು, ಜಲಾಶಯ ಗಟ್ಟಿ ಮುಟ್ಟಾಗಿದೆ. ಜನ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಜಲಾಶಯದ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಕಾಲಕಾಲಕ್ಕೆ ಜಲಾಶಯದ ಸ್ಥಿತಿಗತಿ ಪರಾಮರ್ಶಿಸಿ ರಿಪೇರಿಯಂತಹ ಚಟುವಟಿಕೆಗಳನ್ನು ಕೈಗೊಂಡು ಕೃಷ್ಣರಾಜಸಾಗರ ಜಲಾಶಯ ಸುಸ್ಥಿತಿಯಲ್ಲಿ ಇಟ್ಟಿದೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ಕೆಡಿಪಿ ಸಭೆ ವೇಳೆ ಕೆಆರ್'ಎಸ್ ಸ್ಥಿತಿಗತಿ ಕುರಿತೂ ಚರ್ಚೆಗೆ ಬಂದಿತು. ಈವೇಳೆ ಸಚಿವ ಎನ್ ಚಲುವರಾಯಸ್ವಾಮಿ, ಕೃಷ್ಣರಾಜ ಸಾಗರ ಸುಭದ್ರವಾಗಿದೆ. ಯಾವುದೇ ಆತಂಕ ಬೇಡ ಎಂದು ಹೇಳಿದರು.
ಜಿಲ್ಲೆಯಲ್ಲಿ 948 ಕೆರೆಗಳಿದ್ದು, ಕೆರೆ ತುಂಬಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಈ ಬಾರಿ ಉತ್ತಮ ಮಳೆ ಯಾಗಿದ್ದು, ಬೆಳೆಗಳಿಗೆ ನೀರಿನ ತೊಂದರೆ ಇಲ್ಲ. ತಾಂತ್ರಿಕಾ ತೊಂದರೆಗಳಿಂದ ಕೆಲವು ಭಾಗಗಳಿಗೆ ಕೃಷಿಗೆ ನೀರು ತಲುಪಿಲ್ಲ ತಡವಾಗಿ ನೀರು ತಲುಪುತ್ತದೆ. ಇದನ್ನು ನೀರಾವರಿ ಇಲಾಖೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡ ಬೇಕು. ಇಲ್ಲಾವಾದಲ್ಲಿ ರೈತರಿಂದ ಹಲವಾರು ದೂರು ಬರುತ್ತದೆ ಎಂದು ಸಚಿವರು ಹೇಳಿದರು.
ಕಾವೇರಿ ಅಚ್ಚುಕಟ್ಟಿನಲ್ಲಿ ಹೆಚ್ಚಾಗಿ ಮಳೆಯಾಗಿದೆ. ಕೃಷಿ ಹಾಗೂ ಕೆರೆಗಳಿಗೆ ನೀರು ನೀಡಬೇಕು. ನೀರು ಹರಿಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ತಿಳಿಸಬೇಕು.ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ಕೊನೆಯ ಭಾಗದಲ್ಲಿರುವ ಕೆರೆಗಳನ್ನು ಸಹ ತುಂಬಿಸಲು ಹೆಚ್ಚಿನ ಆದ್ಯತೆ ನೀಡಿ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.
ರೈತರಿಗೆ ಕಾಲಕ್ಕೆ ಸರಿಯಾಗಿ ಬಿತ್ತನೆ ಬೀಜ, ಕೀಟಾನಾಶಕ ರಸಗೊಬ್ಬರಗಳ ಬಳಕೆ, ಅಳವಡಿಸಿಕೊಳ್ಳಬೇಕಿರುವ ತಾಂತ್ರಿಕತೆ, ತಳಿಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಿ. ರೈತರ ಆತ್ಮಹತ್ಯೆಯ ಪ್ರಕರಣಗಳಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಕೆಲಸದಲ್ಲಿ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಅರ್ಜಿ ಸಲ್ಲಿಸಿ ಅವರಿಗೆ ಪರಿಹಾರ ಒದಗಿಸಬೇಕು. ಯಾವುದೇ ಕಾರಣಕ್ಕೂ ರೈತರ ಮನೆಯವರನ್ನು ಅಲೆದಾಡಿಸಬಾರದು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕೆಆರ್‌ಎಸ್ ಜಲಾಶಯ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟ್‌ಗಳು ಬರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕಾರ್ಖಾನೆಗಳ ತ್ಯಾಜ್ಯ ನೀರು ಕುಡಿಯುವ ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರು. ಅಲ್ಲದೆ, ನೀರು ಹಂಚಿಕೆಯಲ್ಲಿ ಅಸಮರ್ಥ ನಿರ್ವಹಣೆಗಾಗಿ ನೀರಾವರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎರಡು ವಾರಗಳ ಹಿಂದೆ ಕೆಆರ್‌ಎಸ್ ಜಲಾಶಯ ತುಂಬಿದ್ದರೂ ಕೆಲವುಭಾಗಕ್ಕೆ ನೀರು ಬಂದಿಲ್ಲ. ಇನ್ನೂ ಕೆರೆಗಳು ತುಂಬಿಲ್ಲ. 1,000 ಕ್ಯೂಸೆಕ್ ಅಗತ್ಯವಿದ್ದಲ್ಲಿ ಕೇವಲ 750-850 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ಹೇಳಿದರು.
Advertisement