
ಬೆಂಗಳೂರು: ಕೆಲ ಪುರುಷರನ್ನು ಹನಿ ಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ 32 ವರ್ಷದ ಮಹಿಳೆ, ಆಕೆಯ ಮಲತಾಯಿ ಹಾಗೂ ಮತ್ತೊಬ್ಬ ಪುರುಷ ಸಹಚರನನ್ನು ಬಂಧಿಸಲಾಗಿದೆ.
ಪ್ರಮುಖ ಆರೋಪಿ ಮಹಿಳೆ ಪತಿಯಿಂದ ಬೇರ್ಪಟ್ಟಿದ್ದು, ಜೀವನ ನಡೆಸುವುದು ಕಷ್ಟಕರವಾಗಿತ್ತು. ನಂತರ ಹನಿ ಟ್ರ್ಯಾಪಿಂಗ್ ವರದಿಗಳನ್ನು ನೋಡಿ, ತಾನೂ ಹಾಗೆ ಮಾಡಲು ನಿರ್ಧರಿಸಿದಳು. ಇದಕ್ಕೆ ಮಲ ಸಹೋದರ ಸಹ ಕೈಜೋಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಮೊದಲು ಹಲವು ಮೊಬೈಲ್ ಸಂಖ್ಯೆಗಳಿಗೆ ಮಿಸ್ಡ್ ಕಾಲ್ ಮಾಡುತ್ತಿದ್ದಳು. ಅವರಲ್ಲಿ ಯಾರಾದರೂ ಮತ್ತೆ ಕರೆ ಮಾಡಿದರೆ, ತನ್ನ ಸಿಹಿ ಮಾತಿನ ಮೂಲಕ ಅವರನ್ನು ಬಲೆಗೆ ಬೀಳಿಸುತ್ತಿದ್ದಳು ಮತ್ತು ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರಾರಂಭಿಸುತ್ತಿದ್ದಳು. ನಂತರ ಸಂತ್ರಸ್ತರನ್ನು ತನ್ನ ಮನೆಗೆ ಆಹ್ವಾನಿಸುತ್ತಿದ್ದಳು. ಪುರುಷರು ಆಕೆಯ ಮನೆಗೆ ಬಂದಾಗ ಅವರನ್ನು ಮಲಗುವ ಕೋಣೆಗೆ ಕರೆದುಕೊಂಡು ಹೋಗುತ್ತಿದ್ದರು.
ನಂತರ ಆಕೆಯ ಇಬ್ಬರು ಸಹಚರರು ಒಳಪ್ರವೇಶಿಸಿ ಸಂತ್ರಸ್ತರನ್ನು ಬೆದರಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದರು. ಸಂತ್ರಸ್ತರು ಹಣ ನೀಡಲು ನಿರಾಕರಿಸಿದರೆ, ಪ್ರಮುಖ ಆರೋಪಿಗಳು ಅವರ ವಿರುದ್ಧ ಅತ್ಯಾಚಾರದ ದೂರು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು.
ಆರೋಪಿಗಳನ್ನು ಅಗ್ರಹಾರ ಲೇಔಟ್ ನಿವಾಸಿ ನಜ್ಮಾ ಕೌಸರ್(32) ಮತ್ತು ಆಕೆಯ ಮಲತಾಯಿ ಖಲೀಲ್(24) ಹಾಗೂ ಸಹಚರ ಮೊಹಮ್ಮದ್ ಆಶಿಕ್(20) ಎಂದು ಗುರುತಿಸಲಾಗಿದೆ.
ಹನಿ ಟ್ರ್ಯಾಪ್ ಗೆ ಒಳಗಾದ ಡೆಲಿವರಿ ಬಾಯ್ ಒಬ್ಬ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಕೌಸರ್, ಡೆಲಿವರಿ ಬಾಯ್ ಗೆ ಮಿಸ್ಡ್ ಕಾಲ್ ಕೊಟ್ಟಿದ್ದರು. ತನಗೆ ಯಾರೋ ಪರಿಚಯವಿರುವವರು ಕರೆ ಮಾಡಿರಬಹುದು ಎಂದು ಮತ್ತೆ ಕರೆ ಮಾಡಿದ್ದ ಡೆಲಿವರಿ ಬಾಯ್ ಆಗಸ್ಟ್ 8 ಅವರ ಮನೆಗೆ ತೆರಳಿದ್ದಾನೆ. ಆತನ ಬಳಿ ಸಾಕಷ್ಟು ಹಣ ಸಿಗದ ಹಿನ್ನೆಲೆಯಲ್ಲಿ ಆರೋಪಿಗಳು ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದರು.
ಗ್ಯಾಂಗ್‌ನ ಭಾಗವಾಗಿದ್ದ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement