ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್'ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸೋವಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಜ್ಜಾಗಿದ್ದು ಈ ಹಿನ್ನೆಲೆಯಲ್ಲಿ ಎಲ್ಲೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು, ಸಂಘಟನೆಗಳು, ಸಿದ್ದರಾಮಯ್ಯ ಅಭಿಮಾನಿಗಳ ಸಂಘಗಳು ಇಂದು ನಗರದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಅಲರ್ಟ್ ಆಗಿರುವ ಪೊಲೀಸರ, ರಾಜ್ಯಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು, ಎಲ್ಲಾ ಜಿಲ್ಲಾಕೇಂದ್ರಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಕೆಲ ಕಿಡಿಗೇಡಿಗಳು ಪ್ರತಿಭಟನೆಯಲ್ಲಿ ನುಸಳಿಕೊಂಡು ಕಲ್ಲು ಹೊಡೆದು, ಅಶಾಂತಿಯ ವಾತಾವರಣ ಸೃಷ್ಟಿಸಬಹುದು. ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಬಹುದು. ಈ ನಿಟ್ಟಿನಲ್ಲಿ ಬಹಳ ಎಚ್ಚರಿಕೆ ವಹಿಸುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.
ನಾವು ಮಹಾತ್ಮ ಗಾಂಧಿಜೀಯವರ ಅಹಿಂಸಾ ತತ್ವವನ್ನು ಪಾಲನೆ ಮಾಡುತ್ತೇವೆ. ಅದೇ ಮಾದರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಸಂದೇಶ ರವಾನಿಸಲು ಯತ್ನಿಸುತ್ತೇವೆ ಎಂದು ತಿಳಿಸಿದರು.
ಈ ನಡುವೆ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಕೂಡ ಇಂದು ಪ್ರತಿಭಟನೆ ನಡೆಸಲಿದೆ.
ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಬೆಳಿಗ್ಗೆ 11.30ಕ್ಕೆ ಪ್ರತಿಭಟನೆ ನಡೆಯಲಿದೆ. ಉಭಯ ಪಕ್ಷಗಳ ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
Advertisement