
ಮಂಗಳೂರು: ನಕಲಿ ನೋಟು ಮುದ್ರಿಸುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದು, ಅವರಿಂದ 500 ರೂಪಾಯಿ ಮುಖಬೆಲೆಯ 2,13,500 ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಕೇರಳದ ಕಾಸರಗೋಡಿನ ವಿ ಪ್ರಿಯೇಶ್ (38), ವಿನೋದ್ ಕುಮಾರ್ ಕೆ (33), ಅಬ್ದುಲ್ ಖಾದರ್ ಎಸ್ ಎಂ (58) ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಯೂಬ್ ಖಾನ್ (51) ಎಂದು ಗುರುತಿಸಲಾಗಿದೆ.
ಕಾಸರಗೋಡಿನ ಚೆರ್ಕಳದಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿರುವ ಪ್ರಮುಖ ಆರೋಪಿ ಪ್ರಿಯೇಶ್ ಸಾಲದ ಸುಳಿಯಲ್ಲಿ ಸಿಲುಕಿದ್ದು, ಸಾಲ ತೀರಿಸಲು ನಕಲಿ ನೋಟುಗಳನ್ನು ಮುದ್ರಿಸಲು ಮುಂದಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಕೋಝಿಕ್ಕೋಡ್ ಮತ್ತು ದೆಹಲಿಯಿಂದ ಆನ್‌ಲೈನ್ ಮೂಲಕ ಕಚ್ಚಾ ವಸ್ತುಗಳನ್ನು ಖರೀದಿಸಿದ್ದ ಪ್ರಿಯೇಶ್, ಯುಟ್ಯೂಬ್ ಮೂಲಕ ನಕಲಿ ಕರೆನ್ಸಿ ಮುದ್ರಿಸುವುದನ್ನು ಕಲಿತಿದ್ದಾರೆ. ಪ್ರಿಯೇಶ್ ಕಳೆದ ಮೂರು ತಿಂಗಳಿಂದ ಚೆರ್ಕಳದಲ್ಲಿರುವ ತನ್ನ ಪ್ರಿಂಟಿಂಗ್ ಪ್ರೆಸ್ ನಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಉತ್ತಮ ಗುಣಮಟ್ಟದ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು(ಎಫ್‌ಐಸಿಎನ್) ಮುದ್ರಿಸಿದ್ದು, ಇದು ನಕಲಿ ಎಂದು ತಿಳಿಯಲು ಸಾಮಾನ್ಯ ಜನರಿಗೆ ಕಷ್ಟಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತರ ಮೂವರು ಆರೋಪಿಗಳು ಪ್ರಿಯೇಶ್ ಗೆ ನಕಲಿ ನೋಟು ಚಲಾವಣೆ ಮಾಡಲು ಸಹಕರಿಸಿದ್ದರು. 1 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು 25,000 ರೂಪಾಯಿಗೆ ಬದಲಾಯಿಸುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಸೋಮವಾರ ಬೆಳಗ್ಗೆ ಮಂಗಳೂರಿನ ಹಂಪನಕಟ್ಟೆಯ ಲಾಡ್ಜ್‌ನಲ್ಲಿ ನಕಲಿ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ವೇಳೆ ಬಂಧಿಸಲಾಗಿದೆ.
ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
Advertisement