
ಬೆಂಗಳೂರು: ರಾಜ್ಯದಲ್ಲಿ ನೋಂದಣಿಯಾಗದ ಹೋಟೆಲ್‌ಗಳು, ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂಬಂಧ ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಶುಕ್ರವಾರ ಸಂಜೆ ಸಬೆ ನಡೆಸಿದ್ದು, ಸಭೆಯಲ್ಲಿ ನೋಂದಾವಣಿಯಾಗದ ಎಲ್ಲಾ ಹೋಟೆಲ್, ಹೋಂ ಸ್ಟೇಗಳು ಮತ್ತು ರೆಸಾರ್ಟ್ ಗಳನ್ನು ಬಂದ್ ಮಾಡಲು ಹಾಗೂ ಈ ಅಂಶವನ್ನು ತನ್ನ ನೀತಿಯಲ್ಲಿ ಅಳವಡಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ನೋಂದಣಿಯಾಗಿರುವ ಹೋಟೆಲ್, ಹೋಂಸ್ಟೇಗಳು, ರೆಸಾರ್ಟ್ ಗಳ ಪರಿಶೀಲನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರವಾಸೋದ್ಯಮ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕೆ.ವಿ ಅವರು ಹೇಳಿದ್ದಾರೆ.
ಇದಕ್ಕಾಗಿ ಗ್ರಾಮ ಪಂಚಾಯತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪೊಲೀಸರು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲರ ಸಹಕಾರವನ್ನು ಕೋರಲಾಗುತ್ತಿದೆ.
ಇಲಾಖೆಯಲ್ಲಿ ಇದುವರೆಗೂ 3000 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, 2000 ಹೋಟೆಲ್, ರೆಸಾರ್ಟ್, ಹೋಂಸ್ಟೇಗಳು ಇಲಾಖೆಯ ವ್ಯಾಪ್ತಿಗೆ ಬಂದಿಲ್ಲ. ಅವೆಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ನೋಂದಣಿ ಕುರಿತು ಮಾರ್ಗಸೂಚಿಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು. ಕೆಲವೆಡೆ ಅಕ್ರಮ ಚಟುವಟಿಕೆ, ಅತಿಕ್ರಮಣದ ಬಗ್ಗೆಯೂ ದೂರುಗಳು ಬಂದಿವೆ. ಅವೆಲ್ಲವನ್ನೂ ಬಂದ್ ಮಾಡಿಸಲಾಗುವುದು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಚಿಕ್ಕಮಗಳೂರು, ಹಾಸನ, ಮಡಿಕೇರಿ ಮತ್ತು ದಾಂಡೇಲಿ ಸೇರಿದಂತೆ ಪಶ್ಚಿಮ ಘಟ್ಟಗಳ ಎಲ್ಲಾ ಪ್ರದೇಶಗಳಲ್ಲಿ ಹೋಂಸ್ಟೇಗಳು, ರೆಸಾರ್ಟ್‌ಗಳು ಮತ್ತು ಅತಿಥಿ ಗೃಹಗಳ ಅಣಬೆಯಂತೆ ತಲೆ ಎತ್ತುತ್ತಿರುವುದು ಗಮನಕ್ಕೆ ಬಂದಿದೆ. ಇದಲ್ಲದೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣಗಳಲ್ಲಿ ಹೋಟೆಲ್ ಮತ್ತು ಲಾಡ್ಜ್‌ಗಳ ಸಂಖ್ಯೆ ಏರಿಕೆಯಾಗಿದೆ. ಸಾಹಸ ಮತ್ತು ಜಲಚರ ಕ್ರೀಡೆಗಳು ಹೆಚ್ಚುತ್ತಿರುವ ಸ್ಥಳಗಳಲ್ಲಿ ಸಣ್ಣ ಹೋಂಸ್ಟೇಗಳು ಮತ್ತು ವಸತಿ ನಿಲಯಗಳು ಹೆಚ್ಚಾಗಿವೆ. ಇವುಗಳನ್ನು ನಿಯಂತ್ರಿಸಬೇಕಿದೆ.
ಬುಕಿಂಗ್ ಮಾಡುವ ಮೊದಲು, ಪ್ರವಾಸಿಗರು/ನಾಗರಿಕರು ತಾವು ಕಾಯ್ದಿರಿಸುತ್ತಿರುವ ಹೋಟೆಲ್, ರೆಸಾರ್ಟ್, ಹೋಂಸ್ಟೇ ಇಲಾಖೆಯಲ್ಲಿ ನೋಂದಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್ ನಲ್ಲಿ ಪರಿಶೀಲಿಸಬೇಕು. ಯಾವುದೇ ನ್ಯೂನತೆಗಳು ಅಥವಾ ಅಕ್ರಮಗಳನ್ನು ಕಂಡುಬಂದರೆ, ಇಲಾಖೆಗೆ ಅಥವಾ ಪೊಲೀಸರಿಗೆ ದೂರು ನೀಡಬೇಕು. ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮ ನೀತಿಯ ಭಾಗವಾಗಿ ಇದನ್ನು ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.
Advertisement