ಬೆಂಗಳೂರು: ಬಿಬಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾನುವಾರ ಸಂಜೆ ಬಂಧನಕ್ಕೊಳಗಾಗಿದ್ದ ಡ್ಯಾನ್ಸ್ ಕೊರಿಯೊಗ್ರಾಫರ್, ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಯುವತಿ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದ ಎಂದು ಪೊಲೀಸರಿಗೆ ತನಿಖೆ ವೇಳೆ ತಿಳಿದುಬಂದಿದೆ.
ಭಾನುವಾರ ನಸುಕಿನಲ್ಲಿ ಡ್ರಾಪ್ ನೀಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಡುಗೋಡಿ ಸಮೀಪದ ಎಸ್‌ಆರ್‌ನಗರದ ಮುಕೇಶ್ವರನ್ ಅಲಿಯಾಸ್ ಮುಖೇಶ್ (24ವ) ಎಂಬಾತನನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಮುಖೇಶ್ 2003ರಲ್ಲಿ ಬೆಂಗಳೂರಿಗೆ ಬಂದಿದ್ದರು. ಆತನಿಗೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಸೋಮವಾರ ನಗರದ ನ್ಯಾಯಾಲಯಕ್ಕೆ ಮುಖೇಶ್‌ನನ್ನು ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಡಿಸಿಪಿ (ಆಗ್ನೇಯ) ಸಾರಾ ಫಾತಿಮಾ ತಿಳಿಸಿದ್ದಾರೆ. ಮುಖೇಶ್ ನ ಸ್ಕೂಟರ್ ನೋಂದಣಿ ಸಂಖ್ಯೆ ಆಧರಿಸಿ ಆತನನ್ನು ಪತ್ತೆ ಮಾಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಆಗಿದ್ದೇನು?: ಅಪರಾಧ ನಡೆದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಂತ್ರಸ್ತೆ ನೀಡಿದ ಸುಳಿವುಗಳು ಆತನನ್ನು ಹಿಡಿಯಲು ಸಹಾಯ ಮಾಡಿದೆ. ಮುಖೇಶ್ ನನ್ನು ಆತನ ಮನೆಯಿಂದ ಬಂಧಿಸಲಾಗಿದೆ. ಭಾನುವಾರ ರಾತ್ರಿ ಕೋರಮಂಗಲದ ಪಬ್‌ನಲ್ಲಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಮನೆಗೆ ಹೋಗುವಾಗ, ಯುವತಿಯೊಬ್ಬಳೇ ಸಹಾಯ ಕೇಳುತ್ತಿರುವುದು ಕಂಡುಬಂದು ಅದನ್ನು ದುರುಪಯೋಗ ಪಡೆದುಕೊಳ್ಳಲು ನೋಡಿದ ಮುಖೇಶ್ ಆಕೆಯ ಬಳಿ ಬಂದು ಆಕೆಯನ್ನು ಮನೆಗೆ ಬಿಡಲು ಮುಂದಾಗುವಂತೆ ನಾಟಕವಾಡಿದ್ದನು. ಆದರೆ ಆಕೆಯನ್ನು ದೂರದ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಕೋರಮಂಗಲದ ಮಾಲ್ ಬಳಿ ಸಂತ್ರಸ್ತೆಯ ಸ್ನೇಹಿತ ಚಲಾಯಿಸುತ್ತಿದ್ದ ಕಾರು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ಆಡುಗೋಡಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement