
ಬೆಂಗಳೂರು: ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರ ರಕ್ಷಣೆಗೆ ತುರ್ತಾಗಿ ಕಾನೂನು ಜಾರಿಗೆ ತರಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಿಮ್ಹಾನ್ಸ್‌ನ ನಿವಾಸಿ ವೈದ್ಯರ ಸಂಘ (ಆರ್‌ಡಿಎ) ಸೋಮವಾರ ಬರೆದಿದೆ.
ಕೋಲ್ಕಾತ್ತಾದಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಹತ್ಯೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ದಿನದಂದು ನಡೆದ ಶಾಂತಿಯುಕ ಪ್ರತಿಭಟನೆ ವೇಳೆ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಘಟನೆ ಬೆನ್ನಲ್ಲೇ ವೈದ್ಯರ ಸಂಘ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದೆ.
ವೈದ್ಯರ ವಿರುದ್ಧ ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿದ್ದು, ವೈದ್ಯಕೀಯ ವೃತ್ತಿಪರರು ಅಪಾಯದಲ್ಲಿದ್ದಾರೆ. ಇತ್ತೀಚಿನ ಘಟನೆಗಳು ಇದಕ್ಕೆ ಇಂಬು ನೀಡುತ್ತಿವೆ. ಹೀಗಾಗಿ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಸಂಸ್ಥೆ ರಕ್ಷಣೆಗೆ ಕಠಿಣ ಕಾನೂನು ಜಾರಿ ಅಗತ್ಯವಿದೆ. ಕಾನೂನು ಮೂಲಕ ಅಪರಾಧಿಗಳಿಗೆ ತ್ವರಿತ ಶಿಕ್ಷೆ ಹಾಗೂ ಸೂಕ್ತ ನ್ಯಾಯ ಸಿಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಿಂಸಾಚಾರ, ಅತ್ಯಾಚಾರ ಖಂಡಿಸಿ ನಿಮ್ಹಾನ್ಸ್ ನಲ್ಲಿ ಕ್ಲಿನಿಕಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ತುರ್ತು ಸೇವೆಗಳು ಮುಂದುವರೆಸುವುದಾಗಿಯೂ ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳ ನಿಯೋಜಿಸಿ: ಸಂಸದ ಡಾ.ಮಂಜುನಾಥ್
ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆಯನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಮೈಸೂರಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಶೇ.55 ರಷ್ಟು ಮಹಿಳೆಯರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಥ ಪ್ರಕರಣಗಳು ನಡೆದಾಗ ಇದು ಅವರನ್ನು ವಿಚಲಿತಗೊಳಿಸುತ್ತದೆ. ಆದ್ದರಿಂದ ಕೂಡಲೇ ಈ ಬಗ್ಗೆ ಕಠಿಣ ಕ್ರಮ ಜರುಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಂಸ್ಥೆಗಳ ಆಡಿಟ್ ನಡೆಸಬೇಕಾದ ತುರ್ತು ಎದುರಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಗಳು ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ಆದ್ದರಿಂದ ಇವರಿಗೆ ಸೂಕ್ತ ಮೂಲಸವಲತ್ತು ಒದಗಿಸಬೇಕಾಗಿದೆ. ಶೌಚಾಲಯ, ವಿಶ್ರಾಂತಿ ಕೊಠಡಿ, ಡೈನಿಂಗ್ ಹಾಲ್ ಮುಂತಾದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಆಗ ಮಾತ್ರ ವೈದ್ಯರು ಅದರಲ್ಲೂ ಮಹಿಳಾ ವೈದ್ಯರು ನಿರ್ಭೀತಿಯಿಂದ ಕರ್ತವ್ಯ ಮಾಡಲು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯನ್ನು ಹತ್ತು ವರ್ಷಗಳ ಹಿಂದೆಯೇ ನಾನು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಜಾರಿಗೊಳಿಸಿರುವೆ.
ರೋಗಿಗಳನ್ನು ಆಸ್ಪತ್ರೆಗೆ ಕರೆತರುವ ಸಾರ್ವಜನಿಕರು ಸಹ ವೈದ್ಯರ ಜತೆ ಸ್ಪಂಧಿಸಬೇಕು. ಆದರೆ ವಿಪರ್ಯಾಸವೆಂದರೆ, ವೈದ್ಯರ ಜತೆ ರೋಗಿಗಳ ಸಂಬಂಧಿಕರು ಅನುಚಿತವಾಗಿ ವರ್ತಿಸುವ, ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮುಂದೊಂದು ದಿನ ವೈದ್ಯರು ಗನ್ ಮೆನ್ ಗಳ ನೆರವಿನಿಂದ ಕರ್ತವ್ಯ ನಿರ್ವಹಿಸಬೇಕಾಗಬಹುದು ಎಂದು ಮಾರ್ಮಿಕವಾಗಿ ನುಡಿದರು.
ಕೇವಲ ದೊಡ್ಡ ದೊಡ್ಡ ಕಟ್ಟಡಗಳ ಐಷಾರಾಮಿ ಆಸ್ಪತ್ರೆಗಳು, ಅತ್ಯಾಧುನಿಕ ಉಪಕರಣಗಳು ಇದ್ದರೆ ಮಾತ್ರ ಸಾಲದು. ಇದಕ್ಕೆ ಪೂರಕವಾದ ಮಾನವ ಸಂಪನ್ಮೂಲದ ಅವಶ್ಯಕತೆ ಪೂರೈಸುವ ಹೂಣೆಗಾರಿಕೆಯನ್ನು ಸರಕಾರಗಳು ನಿಭಾಯಿಸಬೇಕು. ಆಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ. ಈ ಬಗ್ಗೆ ಸರಕಾರಕ್ಕೆ ಏನಾದರು ಪ್ರಸ್ತಾವನೆ ಸಲ್ಲಿಸಿದರೆ, ಅಷ್ಟೊಂದು ಜನ ಯಾಕೆ ಎಂಬ ಪ್ರಶ್ನೆ ಎದುರಿಸಬೇಕಾಗುತ್ತದೆ. ಸಚಿವರ ಆಪ್ತ ವಲಯದಲ್ಲಿರುವ ವ್ಯಕ್ತಿಗಳು ಎಷ್ಟೊಂದು ಪ್ರಭಾವಿಗಳಾಗಿರುತ್ತಾರೆ ಎಂದರೆ, ಅಧಿಕಾರಿಗಳನ್ನು ಬದಲಾಯಿಸು ಸಾಮರ್ಥ್ಯ ಅವರಿಗಿರುತ್ತದೆ. ಈ ವ್ಯವಸ್ಥೆ ಬದಲಾಗಬೇಕು. ಕೆಲವೊಂದು ಸಲ ಸಚಿವರ ವಾಹನ ಚಾಲಕರು, ಆಪ್ತ ಸಹಾಯಕ ಸಿಬ್ಬಂದಿಗಳೇ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಮಾರ್ಥ್ಯ ಹೊಂದಿರುತ್ತಾರೆ ಎಂದರು.
Advertisement