ಬೆಂಗಳೂರು: ಅಸ್ತಿತ್ವದಲ್ಲೇ ಇಲ್ಲದ ಗಣಿ ಕಂಪನಿಗೆ ಅಕ್ರಮವಾಗಿ 550 ಎಕರೆ ಮಂಜೂರು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರ ಅನುಮತಿಗಾಗಿ ಕಾಯುತ್ತಿದ್ದೇವೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಹೇಳಿದರು.
ಕುಮಾರಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದ್ದರಿಂದ ಲೋಕಾಯುಕ್ತರು 2023ರಲ್ಲಿಯೇ ಪ್ರಾಸಿಕ್ಯೂಷನ್'ಗೆ ಅನುಮತಿ ಕೋರಿದ್ದರು. ಇದೀಗ 2ನೇ ಬಾರಿಗೆ ಅನುಮತಿ ಕೋರಿದ್ದಾರೆ. ರಾಜ್ಯಪಾಲರು ಅನುಮತಿ ನೀಡದಿದ್ದರೆ ಲೋಕಾಯುಕ್ತ ಸಂಸ್ಥೆಗೆ ನ್ಯಾಯಾಲಯದ ಮೊರೆ ಹೋಗುವುದೂ ಸೇರಿದಂತೆ ಹಲವು ಮಾರ್ಗಗಳಿವೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿರುವುದರಿಂದಾಗಿ ಅನುಮತಿ ನೀಡುವ ಜಿಜ್ಞಾಸೆ ಎದುರಾಗುವ ಅಗತ್ಯ ಇಲ್ಲ. ಕುಮಾರಸ್ವಾಮಿ ಇಲ್ಲಿಯವರು. ಘಟನೆ ನಡೆದಿದ್ದು ಇಲ್ಲಿ. ಕಂಪೆನಿ ನೊಂದಾವಣೆ ಆಗಿರುವುದು ಇಲ್ಲಿ. ಜಮೀನು ಕೊಟ್ಟಿರುವುದು ರಾಜ್ಯದಲ್ಲಿ. ಹೀಗಾಗಿ ಅದರ ವ್ಯಾಪ್ತಿ ಕೂಡ ಕರ್ನಾಟಕದಲ್ಲೇ ಇದೆ ಎಂದು ಹೇಳಿದರು.
ರಾಜ್ಯಪಾಲರು ಅನುಮತಿ ಕೊಟ್ಟ ಬಳಿಕ ನಡೆಯುವ ಪ್ರಕ್ರಿಯೆಗಳು ನೈತಿಕತೆ ಅಥವಾ ರಾಜಕೀಯ ಪ್ರಶ್ನೆಗಳಿಗೆ ಕಾರಣವಾಗಬಹುದು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ಮಾಡಲು 29 ರಂದು ಕಾಲಾವಕಾಶ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ದೂರನ್ನು ದಾಖಲಿಸಲಿದೆ ಎಂದು ತಿಳಿಸಿದರು.
ಇದೇ ವೇಳೆ ಇತರೆ ಹಗರಣ ಪ್ರಕರಣಗಳ ಕುರಿತು ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಗಾಲಿ ಜನಾರ್ದನ ರೆಡ್ಡಿ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರ ಮೇಲೆ ಒತ್ತಡ ಹೇರುವ ಕುರಿತು ಪರಮೇಶ್ವರ್ ಅವರು ಸುಳಿವು ನೀಡಿದರು.
ಭೋವಿ ಅಭಿವೃದ್ಧಿ ನಿಗಮ ಮತ್ತು ದೇವರಾಜ್ ಅರಸು ಟ್ರಕ್ ಟರ್ಮಿನಲ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಚಾರ್ಜ್‌ಶೀಟ್‌ಗಳೊಂದಿಗೆ ಸಿದ್ಧವಾಗಿದೆ ಎಂದೂ ಇದೇ ವೇಳೆ ಹೇಳಿದರು.
ಮುಡಾ ಹಗರಣ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಪಕ್ಷದ ಶಾಸಕರು ಮುಖ್ಯಮಂತ್ರಿಗಳ ಬೆನ್ನಿಗೆ ನಿಲ್ಲಲಿದ್ದಾರೆಂದು ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಉನ್ನತ ನಾಯಕರು ಸಿಎಂ ಜೊತೆಗ ನಿಲ್ಲುತ್ತೇವೆ. ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲು ಸಿಎಂ ಮತ್ತು ಡಿಸಿಎಂ ಇಬ್ಬರೂ ಶುಕ್ರವಾರ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ.
ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿರುವುದರಿಂದ ಈ ವಿಷಯವು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಲಿದೆ I.N.D.I.A ಬಣದಲ್ಲ ಈ ಕುರಿತು ಚರ್ಚೆಯಾಗಲಿದೆ ಎಂದು ತಿಳಿಸಿದರು.
Advertisement