ಬೆಂಗಳೂರು: ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಸ್ಟ್ ಕ್ಲಬ್‌ನಲ್ಲಿ ಮೊನ್ನೆ ಸೋಮವಾರ ಸಂಜೆ ಕೊಳದಲ್ಲಿ ಈಜುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಗೊಟ್ಟಿಗೆರೆಯ ಅಪಾರ್ಟ್‌ಮೆಂಟ್ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ದಯಾನಂದ ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ದಯಾನಂದ ಅದೇ ಅಪಾರ್ಟ್‌ಮೆಂಟ್‌ನಲ್ಲಿರುವ ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 10 ನಿಮಿಷ ಈಜಿದ ಬಳಿಕ ಕೊಳದಲ್ಲಿ ಪ್ರಜ್ಞೆ ತಪ್ಪಿದ್ದು, ಸ್ನೇಹಿತರು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ನಂತರ ಪತ್ನಿಗೆ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಪತಿಯ ಸಾವಿನ ಬಗ್ಗೆ ಪತ್ನಿ ಶಂಕೆ ವ್ಯಕ್ತಪಡಿಸಿರುವುದರಿಂದ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ಇಬ್ಬರು ಸಹೋದರರು ಕೆರೆಯಲ್ಲಿ ಮುಳುಗಿ ಸಾವು: ಬೆಂಗಳೂರು ಗ್ರಾಮಾಂತರ ನೆಲಮಂಗಲ ಸಮೀಪದ ಸೊಂಡೆಕೊಪ್ಪದಲ್ಲಿ ಮೊನ್ನೆ ಮಂಗಳವಾರ ಸಂಜೆ ಇಬ್ಬರು ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಸಹೋದರರಾದ ಅಂಬರೀಶ್ (9ವ), ಮೂರನೇ ತರಗತಿಯ ವಿದ್ಯಾರ್ಥಿ ಮತ್ತು ಸಂತೋಷ್ (7ವ) ಎಂದು ಗುರುತಿಸಲಾಗಿದೆ. ಇಬ್ಬರೂ ಕಲಬುರಗಿ ಮೂಲದ ಬಿಕೆ ನಗರದ ನಿವಾಸಿಗಳಾಗಿದ್ದರು. ಅವರ ಪೋಷಕರು ಕಟ್ಟಡ ಕಾರ್ಮಿಕರು.
ಮೊನ್ನೆ ಸಂಜೆ 4.30ರ ಸುಮಾರಿಗೆ ಸಹೋದರರಿಬ್ಬರು ಸೊಂಡೆಕೊಪ್ಪದ ಹೊಂಡದ ಬಳಿಗೆ ತೆರಳಿದ್ದು, ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಮಾದನಾಯಕನಹಳ್ಳಿ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement