ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.
ಸಿದ್ಧರಾಮಯ್ಯ ಪ್ರಕರಣದ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಲೋಕಾಯುಕ್ತ ಎಡಿಜಿಪಿ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿರುವ ಜನಪ್ರತಿನಿಧಿಗಳ ನ್ಯಾಯಾಲಯ, ಶೋಕಾಸ್ ನೋಟೀಸ್ ಜಾರಿ ಮಾಡಿದೆ.
ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಅತ್ಯಂತ ಆಪ್ತ ಸ್ನೇಹಿತ ವಿವೇಕಾನಂದ (ಕಿಂಗ್ಸ್ ಕೋರ್ಟ್ ವಿವೇಕ್) ಅವರಿಂದ ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ (1,30,000) ಗಳನ್ನು ಚೆಕ್ ರೂಪದಲ್ಲಿ ಪಡೆದು ಟರ್ಫ್ ಕ್ಲಬ್‌ನ ಅತ್ಯಂತ ಆಯಕಟ್ಟಿನ ಹುದ್ದೆಯಾದ ಸ್ಟಿವರ್ಡ್ ಹುದ್ದೆಗೆ ನಿಯೋಜಿಸುವ ಮೂಲಕ ಪ್ರಜಾ ಪ್ರತಿನಿಧಿಗಳ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು.
ಹತ್ತಾರು ಸಾವಿರ ಕೋಟಿ ರೂಪಾಯಿ ವಹಿವಾಟನ್ನು ಹೊಂದಿರುವ ಟರ್ಫ್ ಕ್ಲಬ್‌ನ ಎಲ್ಲಾ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುವ ಸ್ಟಿವರ್ಡ್ ಹುದ್ದೆಗೆ ನಿಯೋಜನೆ ಮಾಡುವ ಮೂಲಕ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಎನ್.ಆರ್ ರಮೇಶ್ 2022ರಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರಲ್ಲದೇ, ಜನಪ್ರತಿನಿಧಿಗಳ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರನ್ನೂ ಸಹ ದಾಖಲಿಸಿದ್ದರು.
ಸದರಿ ಪ್ರಕರಣದ ತನಿಖೆಯನ್ನು ಏಕ ಪಕ್ಷೀಯವಾಗಿ ನಡೆಸಿದ್ದ ಲೋಕಾಯುಕ್ತರು, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ಧರಾಮಯ್ಯನವರ ಪ್ರಭಾವಕ್ಕೆ ಒಳಗಾಗಿ ಬಿ ರಿಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆದರೆ, ರಮೇಶ್ ರವರ ವಕೀಲರು ದಾಖಲೆಗಳ ಸಹಿತ ಮಂಡಿಸಿದ್ದ ವಾದವನ್ನು ಆಲಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, ಸದರಿ ಪ್ರಕರಣದ ತನಿಖೆಯನ್ನು ಮೊದಲಿನಿಂದ ಹೊಸದಾಗಿ ಪ್ರಾರಂಭಿಸಿ 6 ತಿಂಗಳ ಒಳಗಾಗಿ ಸಮರ್ಪಕವಾದ ಹೊಸ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಕಳೆದ ಫೆಬ್ರವರಿಯಲ್ಲಿ ಆದೇಶಿಸಿದ್ದರು.
ನ್ಯಾಯಾಧೀಶರು ವಿಧಿಸಿದ್ದ ಆರು ತಿಂಗಳ ಗಡುವು ಮೀರಿದ್ದರಿಂದ ನಿನ್ನೆ ವಿಚಾರಣೆಯನ್ನು ಕೈಗೆತ್ತಿಕೊಂಡ ಜನಪ್ರತಿನಿಧಿಗಳ ನ್ಯಾಯಾಲಯ ಲೋಕಾಯುಕ್ತದ ಎಡಿಜಿಪಿ (ಅಪರ ಪೋಲೀಸ್ ಮಹಾ ನಿರ್ದೇಶಕ, ಲೋಕಾಯುಕ್ತ) ರವರು ಖುದ್ದು ಹಾಜರಿ ಇಲ್ಲದೇ ಇರುವುದನ್ನು ಮತ್ತು ಆರು ತಿಂಗಳ ಗಡುವು ಮುಗಿದರೂ ಹೊಸ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಇದ್ದುದರಿಂದ ಲೋಕಾಯುಕ್ತದ ಪರವಾದ ವಕೀಲರನ್ನು ನ್ಯಾಯಾಲಯದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿತು.
ಲೋಕಾಯುಕ್ತದ ವಕೀಲರು ನ್ಯಾಯಾಲಯವು ಮರು ತನಿಖೆಗೆ ಆದೇಶಿಸಿರುವ ವಿಷಯ ಲೋಕಾಯುಕ್ತದ ಎಡಿಜಿಪಿ ಅವರಿಗೆ ತಿಳಿದಿಲ್ಲದೇ ಇರುವುದರಿಂದ ಹೊಸದಾದ ತನಿಖೆ ಇನ್ನೂ ಪ್ರಾರಂಭವಾಗಿಲ್ಲ ಎಂಬ ಮಾತನ್ನು ಹೇಳುತ್ತಿದ್ದಂತೆ ಕೆಂಡಾಮಂಡಲರಾದ ನ್ಯಾಯಾಧೀಶರು, ಈ ಪ್ರಕರಣದ ಮರು ತನಿಖೆಗೆ ನ್ಯಾಯಾಲಯವು ಆದೇಶಿಸಿ ಆರು ತಿಂಗಳು ಈಗಾಗಲೇ ಮುಗಿದಿದ್ದು, ಎಲ್ಲಾ ಮಾಧ್ಯಮಗಳಲ್ಲಿ ಈ ಸಂಬಂಧ ವರದಿಗಳು ಪ್ರಸಾರವಾಗಿರುತ್ತದೆ ಮತ್ತು ನ್ಯಾಯಾಲಯದಿಂದ ಲೋಕಾಯುಕ್ತ ಪೋಲೀಸರಿಗೆ ಅಧಿಕೃತ ಮಾಹಿತಿ ತಲುಪಿರುತ್ತದೆ. ಹೀಗಿರುವಾಗ ನ್ಯಾಯಾಧೀಶರೇ ಖುದ್ದಾಗಿ ಲೋಕಾಯುಕ್ತ ಕಛೇರಿಗೆ ಬಂದು ಎಡಿಜಿಪಿ ಅವರಿಗೆ ಮರು ತನಿಖೆ ಮಾಡುವ ಬಗ್ಗೆ ಆದೇಶ ನೀಡಿರುವುದಾಗಿ ತಿಳಿಸಬೇಕೇ ಎಂದು ಖಾರವಾಗಿ ಲೋಕಾಯುಕ್ತ ವಕೀಲರನ್ನು ಪ್ರಶ್ನಿಸಿತು.
ತಕ್ಷಣವೇ ಲೋಕಾಯುಕ್ತದ ಎಡಿಜಿಪಿ ಅವರಿಗೆ ಈ ಸಂಬಂಧ ಕಾರಣ ಕೇಳಿ ನೋಟೀಸ್ ಜಾರಿ ಮಾಡಿ, ಈ ಕೂಡಲೇ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸಿದರು. ಬಳಿಕ ಮುಂದಿನ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತು.
Advertisement