
ಬೆಂಗಳೂರು: ಆಡುಗೋಡಿ ಪೊಲೀಸ್ ಠಾಣೆಯ ಬಾಷ್ ಸಿಗ್ನಲ್ ಬಳಿ ನಡೆದ ರಸ್ತೆಯಲ್ಲಿ ಪುಂಡಾಟ ಪ್ರಕರಣದಲ್ಲಿ ಮೂವರು ಪಾನಮತ್ತ ವ್ಯಕ್ತಿಗಳು ಹಿಂಬಾಲಿಸಿ, ಹಲ್ಲೆ ನಡೆಸಿದ್ದರಿಂದ ಮುರಿದ ಕನ್ನಡಕದ ಗಾಜಿನ ಚೂರುಗಳು ಮುಖ ಕೊಯ್ದು ಒಡಿಶಾ ಮೂಲದ 30 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿ ರವಿ (ಹೆಸರು ಬದಲಾಯಿಸಲಾಗಿದೆ) ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಜೆ.ಪಿ.ನಗರದ ನಿವಾಸಿ ರವಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಆರೋಪಿಗಳು ಏಕಾಏಕಿ ಮಾರ್ಬಲ್ ರಸ್ತೆಯಲ್ಲಿ ತಿರುವು ಪಡೆದಾಗ ಅವರ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಇಂಡಿಕೇಟರ್ ಹಾಕುವಂತೆ ಸೂಚಿಸಿದ್ದಾರೆ. ಇದರಿಂದ ಹತಾಶೆಗೊಂಡ ಆರೋಪಿಗಳು ಆತನನ್ನು ಬೆನ್ನಟ್ಟಿ ನಿಲ್ಲಿಸಿದ್ದಾರೆ. ಆರೋಪಿಗಳ ಜೊತೆಗೆ ಮತ್ತೊಬ್ಬ ಸೇರಿಕೊಂಡಿದ್ದಾನೆ. ಅವರಲ್ಲಿ ಒಬ್ಬರು ಹೆಲ್ಮೆಟ್‌ನಿಂದ ಬೈಕ್ ಸವಾರನ ಮುಖಕ್ಕೆ ಹೊಡೆದಿದ್ದರಿಂದ ಅವರ ಕನ್ನಡಕ ಮುರಿದಿದೆ. ಸಂತ್ರಸ ಹೆಲ್ಮೆಟ್ ತೆಗೆದಾಗ ತೀವ್ರ ರಕ್ತ ಸೋರುತ್ತಿರುವುದನ್ನು ಕಂಡು ಆರೋಪಿಗಳು ಅಲ್ಲಿಂದ ತೆರಳಿದ್ದಾರೆ. ನಂತರ ಸಂತ್ರಸ್ತ ಆಡುಗೋಡಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಘಟನೆ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಂತ್ರಸ್ತ, ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತನ್ನ ಮುಖಕ್ಕೆ ಒಂಬತ್ತು ಹೊಲಿಗೆ ಹಾಕಲಾಗಿದೆ ಎಂದರು. ಮಂಗಳವಾರ ರಾತ್ರಿ 7.30 ರಿಂದ 8 ಗಂಟೆಯ ನಡುವೆ ಈ ಘಟನೆ ನಡೆದಿದೆ. ಆರೋಪಿಗಳ ಕಪ್ಪು ಬಣ್ಣದ ದ್ವಿಚಕ್ರ ವಾಹನಕ್ಕೆ ನಂಬರ್ ಪ್ಲೇಟ್ ಮತ್ತು ಹೆಡ್‌ಲೈಟ್ ಇರಲಿಲ್ಲ. ಹೆಲ್ಮೆಟ್ ಧರಿಸದೆ ಸವಾರಿ ಮಾಡುತ್ತಿದ್ದ ಆರೋಪಿಗಳು ಏಕಾಏಕಿ 4ನೇ ಕ್ರಾಸ್ ನಿಂದ ಬಂದು ಮಾರ್ಬಲ್ ರಸ್ತೆ ಮೂಲಕ ಕಟ್ ಮಾಡಿದ್ದಾರೆ. ಹೆಡ್‌ಲೈಟ್ ಇಲ್ಲದ ಕಾರಣ ರವಿ ಅವರ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ.
ನನ್ನ ಮೇಲೆ ಹಲ್ಲೆ ನಡೆಯುತ್ತಿದ್ದರೂ ಜನರು ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು. ಬೈಕ್ ನಲ್ಲಿ ಗಸ್ತಿನಲ್ಲಿದ್ದ ಪೊಲೀಸರೊಬ್ಬರಿಗೆ ಮನವಿ ಮಾಡಿದರೂ ನೆರವಿಗೆ ಬರಲಿಲ್ಲ. ಆರೋಪಿಗಳು ಕನ್ನಡದಲ್ಲಿ ಮಾತನಾಡುತ್ತಿದ್ದರು. ಸುತ್ತಮುತ್ತ ಅನೇಕ ಸಿಸಿಟಿವಿಗಳಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಆರೋಪಿಗಳನ್ನು ಇನ್ನೂ ಬಂಧಿಸಬೇಕಿದ್ದು, ಕೆಲ ಸುಳಿವು ಸಿಕ್ಕಿದೆ ಎಂದು ಆಡುಗೋಡಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Advertisement