ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸೇರಿದ ಸಿದ್ದಸಿರಿ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಾರ್ಯಾಚರಣೆ ಸಮ್ಮತಿ ಪತ್ರ ನೀಡುವಂತೆ ಹೈಕೋರ್ಟ್ ತೀರ್ಪನ್ನು ಪರಿಶೀಲಿಸಿ, ಕಾಲಮಿತಿಯೊಳಗೆ ಕ್ರಮ ವಹಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಸಿದ್ದಸಿರಿ ಕಾರ್ಖಾನೆ ಈ ಹಿಂದೆ ಅನುಮತಿ ಇಲ್ಲದೆ ಬಾಯ್ಲರ್ ಸ್ಥಾಪನೆ ಮಾಡಿದ್ದು, ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಹಂತದಲ್ಲಿದ್ದರೂ ನಿಯಮ ಉಲ್ಲಂಘಿಸಿ ಲಕ್ಷಾಂತರ ಟನ್ ಕಬ್ಬು ಅರೆದಿತ್ತು. ಹೀಗಾಗಿ ಮಂಡಳಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಎಥೆನಾಲ್ ಕಾರ್ಖಾನೆ ಪೂರ್ವಾನುಮತಿ ಇಲ್ಲದೆ ತನ್ನ ಸಾಮರ್ಥ್ಯ ವಿಸ್ತರಣೆ ಮಾಡಿ ಕಾನೂನು ಬಾಹಿರವಾಗಿ ಕಾರ್ಯಾಚರಣೆ ನಡೆಸಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಇಲಾಖೆಯೇ 1 ಕೋಟಿ 58 ಲಕ್ಷ ದಂಡ ವಿಧಿಸಿತ್ತು, ದಂಡ ಕಟ್ಟಿದ ಬಳಿಕವೂ ಘಟಕ ಸ್ಥಾಪನೆಗೆ ಅನುಮೋದನೆ ಪಡೆಯದೆ ಮತ್ತೆ ಕಾರ್ಯಾಚರಣೆ ಮಾಡಿತ್ತು. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಾಗಲೀ, ದ್ವೇಷವಾಗಲೀ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಪೂರ್ವಾನುಮತಿ ಇಲ್ಲದೆ ಕಾರ್ಖಾನೆ ಲಕ್ಷಾಂತರ ಟನ್ ಕಬ್ಬು ನುರಿಸಿ ಎಥೆನಾಲ್ ಉತ್ಪಾದಿಸಿರುವುದು ಅಲ್ಲದೆ, ನದಿಗೆ ತ್ಯಾಜ್ಯ ಹರಿಯಬಿಟ್ಟಿರುವ ಆರೋಪವೂ ಇದೆ. ಇದು ಜಲ ಕಾಯಿದೆ ಮತ್ತು ಪರಿಸರ ಸಂರಕ್ಷಣಾ ಕಾಯಿದೆಯ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದರು.
Advertisement