
ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು, ಸಂಚಾರಕ್ಕೆ ಅಯೋಗ್ಯ ಎನಿಸುವಷ್ಟು ಹದಗೆಟ್ಟಿವೆ. ಇನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಭಿವೃದ್ಧಿ ಪಡಿಸಿರುವ ಅರ್ಕಾವತಿ ಲೇಔಟ್ 19ನೇ ಬ್ಲಾಕ್‌ನ ನಿವಾಸಿಗಳು ತಮ್ಮ ಮನೆಯಿಂದ ವಾಹನಗಳನ್ನು ಹೊರಕ್ಕೆ ತೆಗೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಅರ್ಕಾವತಿ ಬಡಾವಣೆಯ ಚಳ್ಳಕೆರೆ ಗ್ರಾಮದ 600 ನಿವೇಶನಗಳನ್ನು ಮಂಜೂರು ಮಾಡಿ 18 ವರ್ಷಗಳಾಗಿವೆ. ಮೂರನೇ ಎರಡರಷ್ಟು ನಿವೇಶನಗಳಲ್ಲಿ ಈಗಾಗಲೇ ಮನೆಗಳನ್ನು ನಿರ್ಮಿಸಲಾಗಿದ್ದು, ಜನ ವಾಸವಾಗಿದ್ದಾರೆ. ಆದರೆ, ಮೂಲ ಸೌಕರ್ಯಗಳ ಕೊರತೆಯಿಂದ 19ನೇ ಬ್ಲಾಕ್‌ನ ನಿವಾಸಿಗಳು ನಿತ್ಯವೂ ಪರದಾಡುವಂತಾಗಿದೆ.
ಬಿಡಿಎ ಲೇಔಟ್‌ನ ರಸ್ತೆಗಳು ಅಕ್ಷರಸಹ ಕೆಸರುಗದ್ದೆಯಾಗಿದ್ದು, ಗುಂಡಿಗಳು ಮತ್ತು ಇತರ ತಗ್ಗಾದ ರಸ್ತೆಗಳನ್ನು ಇಟ್ಟಿಗೆ ಮತ್ತು ಜೆಲ್ಲಿ ಕಲ್ಲುಗಳಿಂದ ತುಂಬಿಸುತ್ತಿದ್ದಾರೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಅರ್ಕಾವತಿ ಲೇಔಟ್ ನ 19ನೇ ಬ್ಲಾಕ್ ನಿವಾಸಿಗಳ ಸಂಘದ ಪದಾಧಿಕಾರಿ ಎಚ್ ಬಿ ಪಾಟೀಲ್ ಕರಡಕಲ್ ಅವರು, ‘ನಿವಾಸಿಗಳು ರಸ್ತೆಯ ಗುಂಡಿಗಳನ್ನು ದೊಡ್ಡ ದೊಡ್ಡ ಕಲ್ಲುಗಳು, ಜಲ್ಲಿ ಕಲ್ಲು ಮತ್ತು ಇಟ್ಟಿಗೆಗಳಿಂದ ತುಂಬಿಸಿ ಅದರಲ್ಲಿಯೇ ಸಂಚರಿಸುತ್ತಿದ್ದಾರೆ. ನಮ್ಮ ವಾಹನಗಳನ್ನು ನಮ್ಮ ಬಡಾವಣೆಯಿಂದ ಹೊರಗೆ ತೆಗೆದುಕೊಂಡು ಹೋಗಲು ನಾವು ಹರಸಾಹಸ ಪಡುತ್ತಿದ್ದೇವೆ ಎಂದಿದ್ದಾರೆ.
ಬಡಾವಣೆಯೊಳಗಿನ ರಸ್ತೆಗಳು ಹಾಗೂ ಚಳ್ಳಕೆರೆ ಮುಖ್ಯರಸ್ತೆ ಮತ್ತು ಬಾಬುಸಾಪಾಳ್ಯದ ಎರಡು ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಡಾಂಬರು ಹಾಕಿಲ್ಲ. ಹೀಗಾಗಿ ಭಾರೀ ಮಳೆ ಬಂದಾಗ ವಾಹನಗಳ ಚಕ್ರಗಳು ಕೆಸರಿನಲ್ಲಿ ಸಿಲುಕಿಕೊಳ್ಳುತ್ತವೆ ಮತ್ತು ಅವುಗಳನ್ನು ಹೊರತೆಗೆಯಲು ನಾವು ಹರಸಾಹಸ ಪಡಬೇಕು ಎಂದು ಪಾಟೀಲ್ ಹೇಳಿದ್ದಾರೆ.
"ಜೂನ್ 2023 ರಲ್ಲಿ ಬಿಡಿಎ ತಾತ್ಕಾಲಿಕ ಟಾರ್ ರಸ್ತೆ ಮಾಡಯಿತು. ನೀರು ಮತ್ತು ನೈರ್ಮಲ್ಯ ಪೈಪ್‌ಲೈನ್‌ಗಳನ್ನು ಹಾಕಲು BWSSB ಆ ರಸ್ತೆಯನ್ನು ಅಗೆದ, ಪೈಪ್‌ಲೈನ್‌ಗಳನ್ನು ಹಾಕಿ ಬಿಟ್ಟುಹೋಯಿತು. ನಂತರ ನಾಲ್ಕು ತಿಂಗಳು ಕಳೆದರೂ ಅದನ್ನು BWSSB ಸರಿ ಮಾಡಲಿಲ್ಲ. ರಸ್ತೆ ಸರಿ ಮಾಡುವಂತೆ ನಾವು ಅವರನ್ನು ಕೇಳಿದಾಗ, ಬಿಡಿಎಗೆ ಹೋಗಿ ಹೇಳಿ ಎಂದರು. ನಂತರ
ಬಿಡಿಎ ಕೇಂದ್ರ ಕಚೇರಿಗೆ ಹಲವು ಬಾರಿ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.
ಮತ್ತೋರ್ವ ನಿವೇಶನದ ಮಾಲೀಕ ಗೋಪಿನಾಥ್ ಅವರು, ತಮಗೆ ಮಂಜೂರಾದ ನಿವೇಶನದಲ್ಲಿ ಇನ್ನೂ ಮನೆ ಕಟ್ಟಿಲ್ಲ. "ಈಗಾಗಲೇ ಅಲ್ಲಿ ವಾಸಿಸುತ್ತಿರುವ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಾಖಲೆಗಳು ಅಸಲಿ ಇರುತ್ತವೆ ಮತ್ತು ದಾವೆ ಮುಕ್ತವಾಗಿರುತ್ತವೆ ಎಂದು ನಾವು ಬಿಡಿಎ ಸೈಟ್‌ಗಳನ್ನು ಖರೀದಿಸುತ್ತೇವೆ. ಆದರೆ ಈ ರೀತಿಯ ಪರಿಸ್ಥಿತಿಯಲ್ಲಿ ನಾವು ಎಂದಿಗೂ ನಿರೀಕ್ಷಿಸಿರಲಿಲ್ಲ” ಎಂದಿದ್ದಾರೆ.
ಕೆಆರ್ ಪುರಂ ಶಾಸಕ ಬೈರತಿ ಬಸವರಾಜು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ, ಇದುವರೆಗೂ ಆಶ್ವಾಸನೆಯಾಗಿಯೇ ಉಳಿದಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement