ಬೆಂಗಳೂರು: ಹಿಜ್ಬ್-ಉತ್-ತಹ್ರೀರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ಬೆಂಗಳೂರಿನಲ್ಲಿ ಓರ್ವ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ ಐಎ (NIA) ಅಧಿಕಾರಿಗಳು ಓರ್ವ ಶಂಕಿತ ಉಗ್ರನನ್ನು ಬಂಧಿಸಿದ್ದು, ಶಂಕಿತ ಭಯೋತ್ಪಾದಕ ತಮಿಳುನಾಡು ಹಿಜ್ಬ್-ಉತ್-ತಹ್ರೀರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಎಂದು ಹೇಳಲಾಗಿದೆ.
ಅಜೀಜ್ ಅಹ್ಮದ್ ಎಂದು ಗುರುತಿಸಲ್ಪಟ್ಟ ಶಂಕಿತ ಭಯೋತ್ಪಾದಕನನ್ನು ವಿಮಾನ ನಿಲ್ದಾಣದಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ.
ಹಿಜ್ಬ್-ಉತ್-ತಹ್ರೀರ್ ಪ್ರಕರಣದ ಆರೋಪಿಯಾಗಿರುವ ಈ ಶಂಕಿತ ಭಯೋತ್ಪಾದಕ ನಿನ್ನೆ ಬೆಳಿಗ್ಗೆ 11.45 ಕ್ಕೆ ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ಪರಾರಿಯಾಗಲು ಯೋಜಿಸಿದ್ದ. ಈ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅತನನ್ನು ಬಂಧಿಸಿದೆ. ವಲಸೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಬಂಧಿಸಲಾಗಿದೆ.
ಉಗ್ರನ ಪತ್ನಿಯ ಹೈಡ್ರಾಮಾ
ಇನ್ನು ಶಂಕಿತ ಭಯೋತ್ಪಾದಕ ಮತ್ತು ಆತನ ಪತ್ನಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಶಂಕಿತ ಉಗ್ರನನ್ನು ವಶಕ್ಕೆ ಪಡೆದ ತಕ್ಷಣ ಆತನ ಪತ್ನಿ ನಾಪತ್ತೆ ದೂರು ನೀಡಲು ಬಂದಿದ್ದರು. ಮಹಿಳೆ ತನ್ನ ಪತಿಯೊಂದಿಗೆ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ತನ್ನ ಪತಿಯನ್ನು ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಶಂಕಿತ ಉಗ್ರನ ಪತ್ನಿ ದೂರು ನೀಡಿದ್ದಾರೆ ಎನ್ನಲಾಗಿದೆ.
7ಕ್ಕೇರಿದ ಬಂಧಿತರ ಸಂಖ್ಯೆ
ಇನ್ನು ಅಜೀಜ್ ಅಹ್ಮದ್ ಬಂಧನದ ಮೂಲಕ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಈ ಪ್ರಕರಣದಲ್ಲಿ ಇದುವರೆಗೆ ಆರು ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ಡಾ ಹಮೀದ್ ಹುಸೇನ್, ಅಹಮದ್ ಮನ್ಸೂರ್, ಅಬ್ದುಲ್ ರೆಹಮಾನ್, ಎಚ್ ಮೊಹಮ್ಮದ್ ಮಾರಿಸ್, ಕದರ್ ನವಾಜ್ ಶೆರೀಫ್, ಅಹ್ಮದ್ ಅಲಿ ಉಮರಿ ಮತ್ತು ಇತರ ಅಪರಿಚಿತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ.
ಏನಿದು ಹಿಜ್ಬ್-ಉತ್-ತಹ್ರೀರ್ ಸಂಘಟನೆ?
ಜಗತ್ತಿನಾದ್ಯಂತ ಇಸ್ಲಾಂ ಸ್ಥಾಪನೆಗೆ ಹೋರಾಡುತ್ತಿರುವ ಅಂತರರಾಷ್ಟ್ರೀಯ ಪ್ಯಾನ್-ಇಸ್ಲಾಮಿಸ್ಟ್ ಮತ್ತು ಮೂಲಭೂತವಾದಿ ಸಂಘಟನೆಯಾದ ಹಿಜ್ಬ್-ಉತ್-ತಹ್ರೀರ್‌ನ ಉಗ್ರಗಾಮಿ, ತೀವ್ರಗಾಮಿ ಮತ್ತು ಮೂಲಭೂತವಾದಿ ಸಿದ್ಧಾಂತದಿಂದ ಪ್ರಭಾವಿತರಾದ ಆರು ಆರೋಪಿಗಳ ವಿರುದ್ಧ ಎನ್‌ಐಎ ಆರಂಭದಲ್ಲಿ ಚೆನ್ನೈ ಪೊಲೀಸರ ಕೇಂದ್ರ ಅಪರಾಧ ವಿಭಾಗದಿಂದ ಪ್ರಕರಣ ದಾಖಲಿಸಿತ್ತು. ಸಂಸ್ಥೆಯ ಸಂಸ್ಥಾಪಕ ತಕಿ ಅಲ್-ದಿನ್ ಅಲ್-ನಭಾನಿ ರಚಿಸಿದ ಕ್ಯಾಲಿಫೇಟ್ ಜಾರಿಗೊಳಿಸಲು ಈ ಸಂಘಟನೆ ಪ್ರಯತ್ನಿಸುತ್ತಿದೆ.
ಚೆನ್ನೈನ ರಾಯಪೆಟ್ಟಾ ನಿವಾಸಿ ಡಾ.ಹಮೀದ್, ಸಂಸ್ಥೆಯ ಮುಖ್ಯ ಸಂಯೋಜಕನೆಂದು ಶಂಕಿಸಲಾಗಿದೆ. ಅಲ್ಲದೆ ಈತ ನಗರದ ಸಭಾಂಗಣದಲ್ಲಿ ತನ್ನ ಸಿದ್ಧಾಂತವನ್ನು ಹರಡಲು ರಹಸ್ಯ ಸಭೆಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ. ಇದು ದೇಶದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ ಎಂದು ಎನ್ಐಎ ಹೇಳಿದೆ. ಅಂತೆಯೇ ಎನ್‌ಐಎ ಔಪಚಾರಿಕವಾಗಿ ಚೆನ್ನೈ ಪೊಲೀಸರಿಂದ ತನಿಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಮತ್ತು ಜುಲೈ 24 ರಂದು ಹೊಸ ಎಫ್‌ಐಆರ್ ಕೂಡ ದಾಖಲಿಸಿದೆ. ನಂತರ ಚೆನ್ನೈ ಪೊಲೀಸರು ಆಗಸ್ಟ್ 5 ರಂದು ಏಜೆನ್ಸಿಗೆ ನಿರ್ಣಾಯಕ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement