ಕಲಬುರಗಿ: ರಾಜ್ಯ ಸರ್ಕಾರ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇಲಾಖೆಗೆ ನೀಡುತ್ತಿದ್ದ ಅನುದಾನದಲ್ಲಿ ಶೇ.80ರಷ್ಟು ಕಡಿತಗೊಳಿಸಿ, ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿರಾಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಪರಿಷ್ಕರಣೆ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಸಿಎಂ ಅವರು ಡಿಸಿಗಳು ಮತ್ತು ಸಿಇಒಗಳ ಜೊತೆ ಮೀಟಿಂಗ್ ಮಾಡುವ ಸಂದರ್ಭದಲ್ಲಿ ರಿಪೋರ್ಟ್‌ಗಳಲ್ಲಿ ವ್ಯತ್ಯಾಸ ಇದ್ದವು. ನಮ್ಮದೊಂದು ರೀತಿಯ ರಿಪೋರ್ಟ್ ಇತ್ತು. ನೀತಿ ಆಯೋಗದ ರಿಪೋರ್ಟ್ ಇನ್ನೊಂದು ರೀತಿ ಇತ್ತು. ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯಲ್ಲಿ ಬಹಳ ತಾರತಮ್ಯ ಇದೆ ಎನ್ನುವುದು ಕಂಡುಬಂತು. ಹೀಗಾಗಿ ಅದನ್ನು ಸರಿಪಡಿಸುವುದು ಹೇಗೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವ ಬಗ್ಗೆ ಅಥವಾ ಪರಿಷ್ಕರಿಸುವ ಬಗ್ಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ ಎಂದು ಹೇಳಿದರು.
ಬಿಪಿಎಲ್ ಕಾರ್ಡಗಳಲ್ಲಿ ಫೇಕ್ ಏನಾದರೂ ಇದ್ದರೆ ಅದನ್ನು ಸರಿಪಡಿಸುವ ಅಭಿಯಾನ ಹಮ್ಮಿಕೊಳ್ಳುತ್ತಿದ್ದೇವೆ ಹೊರತು ಯಾವುದೇ ರೀತಿಯಾದಂತಹ ಮಾನದಂಡ ಪರಿಸ್ಕರಿಸುವ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆರ್ ಡಿಪಿಆರ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಅನುದಾನ ಹೆಚ್ಚಿಸಲಾಗಿದೆ. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆಗೆ ಸಲ್ಲಿಸಿರುವ ಕ್ರಿಯಾ ಯೋಜನೆ ಆಧಾರದ ಮೇಲೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಬಳಿಕ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಮೊದಲು ಬಸನಗೌಡ ಪಾಟೀಲ್ ಯತ್ನಾಳ್‌ರನ್ನ ಪಕ್ಷದಿಂದ ಉಚ್ಚಾಟಿಸಲಿ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಅಲ್ಲಿ ನಾಯಕತ್ವಕ್ಕಾಗಿ ತಿಕ್ಕಾಟ ನಡೆಯುತ್ತಿದೆ. ಇದೆಲ್ಲ ಬಿವೈ ವಿಜಯೇಂದ್ರ ವಿರುದ್ಧ ಆರ್ ಅಶೋಕ್ ವಿರುದ್ಧ ನಡೆದಿರುವ ಬಂಡಾಯ. ಬಿಜೆಪಿಯವರು ತಮ್ಮ ಅಸಮರ್ಥ ನಾಯಕತ್ವವನ್ನು ಮುಚ್ಚಿಕೊಳ್ಳಲು ರಾಜ್ಯಪಾಲರ ಕಚೇರಿಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು. ವಿಜಯೇಂದ್ರ ವಿರುದ್ಧ ಹೇಳಿಕೆ ನೀಡುತ್ತಿರುವ ಯತ್ನಾಳ್ ಮತ್ತು ಮುನಿರತ್ನ ಅವರನ್ನು ನೋಡಿ ಜನ ನಗುತ್ತಿದ್ದಾರೆಂದು ತಿಳಿಸಿದರು.
ಇದೇ ವೇಳೆ ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿ ಆದ ತಕ್ಷಣ ಅವರಿಗೆ ಕಾನೂನು ಅನ್ವಯ ಆಗುವುದಿಲ್ಲವಾ ಮಿಸ್ಟರ್ ಅಶೋಕ್? ತಮ್ಮ ಹೇಳಿಕೆಗೆ ಕುರಿತು ಖುದ್ದು ಸ್ವಾಮೀಜಿಯವರೇ ವಿಷಾದ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಸ್ವಾಮೀಜಿಯವರ ಹೇಳಿಕೆಯನ್ನ ಬಿಜೆಪಿ ಸಮರ್ಥನೆ ಮಾಡುತ್ತಿದೆ. ಕಾನೂನು ಎಂದರೆ ನಮಗೇ ಬೇರೆ, ನಿಮಗೇ ಬೇರೆನಾ? ಎಂದು ಕಿಡಿಕಾರಿದರು
Advertisement