ಕನಕಪುರ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ: ನೈಸ್ ರಸ್ತೆ-ಬನಶಂಕರಿ ಸಂಪರ್ಕಕ್ಕೆ ಎಕ್ಸ್‌ಪ್ರೆಸ್‌ವೇ; DPR ಸಿದ್ಧಪಡಿಸುವಂತೆ BBMPಗೆ ಡಿಕೆಶಿ ಸೂಚನೆ

ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಕನಕಪುರ ರಸ್ತೆಯೂ ಒಂದು. ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕನಕಪುರ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಬನಶಂಕರಿಯಿಂದ ನೈಸ್ ರಸ್ತೆ ವರೆಗೆ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬಿಬಿಎಂಪಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಈ ಸಂಬಂಧ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದಿರುವ ಉಪ ಮುಖ್ಯಮಂತ್ರಿಗಳು, ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಕನಕಪುರ ರಸ್ತೆಯೂ ಒಂದು. ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮೆಟ್ರೊ ರೈಲು ಈ ರಸ್ತೆಯಲ್ಲಿ ಹಾದು ಹೋಗುವುದರಿಂದ ಗ್ರೇಡ್ ಸಪರೇಟರ್ ನಿರ್ಮಿಸುವುದು ಕಷ್ಟ. ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಪೈಪ್‌ಲೈನ್ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸುವ ಮೂಲಕ ಕನಕಪುರ ರಸ್ತೆಯಲ್ಲಿನ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಕಾರ್ಯಸಾಧ್ಯತಾ ವರದಿ ಮತ್ತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ಹಿರಿಯ ಎಂಜಿನಿಯರ್ ಪ್ರತಿಕ್ರಿಯೆ ನೀಡಿ, ಡಿಸಿಎಂ ನಿರ್ದೇಶನದ ಮೇರೆಗೆ ಪ್ರಸ್ತಾವಿತ ಮೇಲ್ಸೇತುವೆಗೆ ಡಿಪಿಆರ್ ಸಿದ್ಧಪಡಿಸಲು ಗುತ್ತಿಗೆ ಕರೆಯಲಾಗುವುದು ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶೀಘ್ರವೇ ಸಂಪೂರ್ಣ ಸರ್ವೀಸ್ ರಸ್ತೆ ನಿರ್ಮಾಣ!

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ರಾಗಿಗುಡ್ಡದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ನಿರ್ಮಿಸಿದೆ. ಆದರೆ, ಕೊನೆಯ ಸಂಪರ್ಕ ಇಲ್ಲದ ಕಾರಣ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರಗೊಂಡಿಲ್ಲ. ಹೀಗಾಗಿ ಈ ಮಾರ್ಗದಲ್ಲಿ ಸಂಚಾರ ಸುಗಮಗೊಳಿಸಲು ಎಕ್ಸ್‌ಪ್ರೆಸ್‌ವೇಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ನಡುವೆ 10,000 ಕೋಟಿಗೂ ಅಧಿಕ ಮೊತ್ತದ ಸುರಂಗ ರಸ್ತೆ ಮತ್ತು ಸ್ಕೈಡೆಕ್ ಯೋಜನೆಗಳ ವಿರುದ್ಧ ಆನ್‌ಲೈನ್ ಅಭಿಯಾನವನ್ನು ಆರಂಭಿಸಿರುವ ನಾಗರಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು, ಸರ್ಕಾರದ ಈ ಪ್ರಸ್ತಾವನೆಯನ್ನು ಖಂಡಿಸಿದ್ದಾರೆ. ಎಕ್ಸ್‌ಪ್ರೆಸ್‌ವೇ ಬಗ್ಗೆ ಈ ಹಿಂದೆಯೇ ಸುಳಿವು ನೀಡಿದ್ದೆ, ಇದೀಗ ಸತ್ಯವಾಗುತ್ತಿದೆ ಎಂದು ಹೇಳಿದ್ದಾರೆ.

ನಗರಕ್ಕೆ ಸಮಗ್ರ ಚಲನಶೀಲತೆ ಯೋಜನೆ (ಸಿಎಂಪಿ) ಸಿದ್ಧಪಡಿಸುವ ಜವಾಬ್ದಾರಿಯನ್ನು ಉನ್ನತ ಪ್ರಾಧಿಕಾರವಾದ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಹೊಂದಿದ್ದು, ಪ್ರಾಧಿಕಾರವನ್ನು (ಬಿಎಂಎಲ್‌ಟಿಎ) ಸಂಪರ್ಕಿಸದೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕೊನೆಯ ಮೈಲಿ ಸಂಪರ್ಕಕ್ಕಾಗಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com