ಬೆಂಗಳೂರು: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎನ್ನುವ ಆದಿತ್ಯ ಠಾಕ್ರೆ ಅವರ ಹೇಳಿಕೆ ಅತ್ಯಂತ ಬಾಲಿಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆನ್ನುವ ಆದಿತ್ಯ ಠಾಕ್ರೆ ಅವರ ಹೇಳಿಕೆ ಅತ್ಯಂತ ಬಾಲಿಶವಾದದ್ದು. ನಮಗೆ ಮಹಾಜನ್ ವರದಿಯೇ ಅಂತಿಮ. ಮಹಾಜನ್ ವರದಿಯನ್ನು ಒಪ್ಪಿಕೊಂಡ ಮೇಲೆ ಮುಗಿಯಿತು. ಯಾರಾದ್ರೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಸಾಧ್ಯವೇ? ಎಂ.ಇ.ಎಸ್ ನವರಾಗಲೀ, ಇನ್ಯಾರೇ ಆಗಲಿ ಈ ವಿಚಾರದಲ್ಲಿ ಪುಂಡಾಟಿಕೆ ಮಾಡಿದರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.
ಗಡಿ ವಿವಾದ ಇತ್ಯರ್ಥ ಆಗುವವರೆಗೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ವೊರ್ಲಿ ಕ್ಷೇತ್ರದ ಶಾಸಕ ಆದಿತ್ಯ ಠಾಕ್ರೆ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಿಂದಾಗಿ ಸಂಭ್ರಮಾಚರಣೆ ನಡೆಯುತ್ತಿದೆ. ಮತ್ತೊಂದೆಡೆ, ಬೆಳಗಾವಿಯ ಪರಿಸ್ಥಿತಿಯನ್ನು ನೋಡಿ. ನೆರೆಯ ಈ ಪ್ರದೇಶದಲ್ಲಿ ಮರಾಠಿ ಭಾಷಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಬೆಳಗಾವಿ ವಿವಾದವನ್ನು ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಮತ್ತು ಗಡಿ ವಿವಾದ ಇತ್ಯರ್ಥವಾಗೋವರೆಗು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದರು.
Advertisement