SM Krishna ನಿಧನಕ್ಕೆ ಗಣ್ಯರ ಸಂತಾಪ: ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿ ಎಂದ ಸಿದ್ದರಾಮಯ್ಯ

ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಪೋಸ್ಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ.

ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ‌ ನನಗೆ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರು ಸದಾ ನನ್ನ ಹಿತೈಷಿಗಳಾಗಿದ್ದರು. ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮುಖ ರಾಜಕಾರಣಿಗಳಿಗೆ ಮಾದರಿಯಾಗಿದೆ. ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ.‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ವರಿಷ್ಠ ಬಿ.ಎಸ್.ಯಡಿಯೂರಪ್ಪ ಅವರು ಪೋಸ್ಟ್ ಮಾಡಿ, ಧೀಮಂತ ಮುತ್ಸದ್ಧಿ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ವಿದೇಶಾಂಗ ಸಚಿವರು, ಪಕ್ಷದ ಹಿರಿಯ ನಾಯಕ, ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರು ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ತಿಳಿದು ಅತೀವ ಆಘಾವಾಗಿದೆ. ರಾಷ್ಟ್ರ, ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ಒಬ್ಬ ಹಿರಿಯಣ್ಣನನ್ನು ಕಳೆದುಕೊಂಡ ನೋವು ನನಗಾಗಿದೆ.

ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ, ಅಗಲಿದ ಆ ಹಿರಿಯ ಚೇತನಕ್ಕೆ ದೇವರು ಉತ್ತಮ ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು, ಅಪಾರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ ಅವರು ಪೋಸ್ಟ್ ಮಾಡಿ, ಕರ್ನಾಟಕ ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ, ಶಿಸ್ತು ಹಾಗೂ ಪ್ರಬುದ್ಧ ಆಡಳಿತಕ್ಕೆ ಮಾದರಿಯಾಗಿದ್ದ ನಾಡಿನ ಇತಿಹಾಸದಲ್ಲಿ ತಮ್ಮ ಸಜ್ಜನಿಕೆ ಹಾಗೂ ಘನತೆಯ ನಡವಳಿಕೆಯಿಂದ ವಿಶೇಷ ಚಾಪು ಮೂಡಿಸಿದ್ದ ಎಸ್.ಎಂ ಕೃಷ್ಣ ಅವರು ಇನ್ನಿಲ್ಲವಾಗಿರುವ ಸುದ್ದಿ ಅತ್ಯಂತ ನೋವು ತಂದಿದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ

ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿ ಇತಿಹಾಸದಲ್ಲಿ ತಮ್ಮ ಶಾಶ್ವತ ಹೆಜ್ಜೆ ಗುರುತು ಮೂಡಿಸಿರುವ ಹೆಮ್ಮೆಯ ಕನ್ನಡಿಗ ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿಗಳಾಗಿ ಕರ್ನಾಟಕದ ಅಭಿವೃದ್ಧಿಗೆ ಅದರಲ್ಲೂ ಬೆಂಗಳೂರನ್ನು ಸಿಲಿಕಾನ್ ಸಿಟಿ ಎನಿಸಿಕೊಳ್ಳಲು ಕೊಟ್ಟ ಕೊಡುಗೆ ಎಂದೆಂದಿಗೂ ಮರೆಯಲಾಗದು. ಕೇಂದ್ರ ಸಚಿವ ಸಂಪುಟದಲ್ಲಿ ವಿವಿಧ ಹುದ್ದೆಗಳೊಂದಿಗೆ ಮಹತ್ವದ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಮಹಾರಾಷ್ಟ್ರದ ರಾಜ್ಯಪಾಲರು ಆಗಿ ಸೇವೆ ಸಲ್ಲಿಸಿದ್ದ ಮಾನ್ಯ ಕೃಷ್ಣರವರು ನಾಲ್ಕು ತಲೆಮಾರಿನ ರಾಜಕಾರಣದ ಬಹುದೊಡ್ಡ ಕೊಂಡಿಯಾಗಿದ್ದರು. ಆರೋಗ್ಯಕರ ಮನಸ್ಸು ಕ್ರಿಯಾಶೀಲತೆಯ ಸಂಕೇತ ಎನ್ನುವ ನಿಟ್ಟಿನಲ್ಲಿ ತಮ್ಮ ಬದುಕಿನ ಕೊನೆಯ ಉಸಿರಿರುವವರೆಗೂ ಸಂಸ್ಕಾರ ಹಾಗೂ ಸುಸಂಸ್ಕೃತ ನಡವಳಿಕೆಯನ್ನು ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ತಮ್ಮ ಇಡೀ ರಾಜಕಾರಣದ ಜೀವನದಲ್ಲಿ ಕಪ್ಪು ಕಲೆಯನ್ನು ಎಂದೂ ಅಂಟಿಸಿಕೊಳ್ಳದ ಕೃಷ್ಣರವರು ಪರಿಶುಭ್ರತೆಗೆ ಮಾದರಿಯಾಗಿದ್ದರು.

ಕರ್ನಾಟಕದ ರಾಜಕಾರಣದಲ್ಲಿ ಕೃಷ್ಣರಿಗೆ ಕೃಷ್ಣರೇ ಸಾಟಿ ಅವರಿಲ್ಲದ ಕರುನಾಡು ನೆನೆಸಿಕೊಳ್ಳುವುದು ಅತ್ಯಂತ ಕಷ್ಟಕರ, ನಮ್ಮಂತ ಯುವ ಪೀಳಿಗೆಯ ರಾಜಕಾರಣಿಗಳಿಗೆ ಅವರು ಆದರ್ಶದ ದಾರಿದೀಪ, ಅವರು ಇಹಲೋಕವನ್ನು ತ್ಯಜಿಸಿದರೂ ಅವರ ನಡೆ-ನುಡಿ ನಿತ್ಯವೂ ಜೀವಂತವಾಗಿ ರಾಜಕಾರಣದ ಆಗಸದಲ್ಲಿ ಮಿನುಗುತ್ತಿರುತ್ತದೆ. ಕರ್ನಾಟಕದ ಇತಿಹಾಸ ಇರುವವರೆಗೂ ಎಸ್ ಎಂ ಕೃಷ್ಣರು ಅಜರಾಮರ, ಅವರ ಅಗಲಿಕೆಯ ದುಃಖ ಅವರ ಕುಟುಂಬದಷ್ಟೇ ಲಕ್ಷಾಂತರ ಜನರನ್ನು ಬಾಧಿಸಲಿದೆ ಈ ದುಃಖದೊಂದಿಗೆ ನಾವು ಭಾಗಿಗಳು. ಎಸ್ಎಂ ಕೃಷ್ಣ ರವರ ರಾಜಕೀಯದ ಕೊನೆಯ ದಿನದ ನಿಲುವುಗಳು ಭಾರತದ ಸುಭದ್ರತೆಗೆ ಪ್ರೇರಣೆಯ ಶಕ್ತಿಯಾಗಿತ್ತು, ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಆತ್ಮ ಸದಾ ಕರುನಾಡು ಹಾಗೂ ದೇಶಕ್ಕಾಗಿ ಮಿಡಿಯುತ್ತಿರುತ್ತದೆ ಎಂಬ ಭಾವ ನನ್ನದಾಗಿದೆ. ಓಂ ಶಾಂತಿ ಎಂದು ತಿಳಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿಯವರು ಪೋಸ್ಟ್ ಮಾಡಿ, ರಾಜ್ಯದ ವಿಧಾನಸಭಾಧ್ಯಕ್ಷರು, ಉಪ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ, ದೇಶಕ್ಕೆ ತಮ್ಮದೇ ಆದ ಅನುಪಮ ಕೊಡುಗೆ ನೀಡಿದ್ದ ಹಿರಿಯರು, ಮುತ್ಸದ್ದಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವುಂಟಾಯಿತು.

ವೈಯಕ್ತಿಕವಾಗಿ ನನಗೆ ಅವರ ಅಗಲಿಕೆ ಬಹಳ ದುಃಖ ಉಂಟು ಮಾಡಿದೆ. ಆ ಚೇತನಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ, ರಾಜ್ಯದ ಜನತೆಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com