
ಬೆಳಗಾವಿ: ಕರ್ನಾಟಕ ಸರ್ಕಾರವು ಈ ವರ್ಷ 641 ಡಿಜಿಟಲ್ ವಂಚನೆ ಪ್ರಕರಣಗಳನ್ನು ವರದಿ ಮಾಡಿದ್ದು ಇದರ ಪರಿಣಾಮವಾಗಿ 109 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಗುರುವಾರ ಹೇಳಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ವಿಧಾನ ಪರಿಷತ್ತಿನಲ್ಲಿ MLC ಕೆ ಪ್ರತಾಪಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ ಪರಮೇಶ್ವರ್ ಅವರು, 'ರಾಜ್ಯದಲ್ಲಿ 641 ಡಿಜಿಟಲ್ ವಂಚನೆ ಪ್ರಕರಣಗಳು ವರದಿಯಾಗಿದ್ದು, ಇದರ ಪರಿಣಾಮ 109 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ.
ಅಂತೆಯೇ ದೇಶದ ಒಟ್ಟು ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ರಾಜ್ಯವು ಪಾಲನ್ನು ಹೊಂದಿದೆ. ಈ ಪೈಕಿ ವಂಚನೆಗೊಳಗಾದ ಮೊತ್ತದಲ್ಲಿ 9.45 ಕೋಟಿ ರೂಗಳನ್ನು ವಸೂಲಿ ಮಾಡಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 27 ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಅಂತೆಯೇ ಡಿಜಿಟಲ್ ವಂಚನೆಯನ್ನು ಎದುರಿಸಲು, ರಾಜ್ಯವು ಫೇಸ್‌ಬುಕ್, ವಾಟ್ಸಾಪ್ ಮತ್ತು 'ಸೈಬರ್ ಜಾಗೃತಿ' ಸಂದೇಶಗಳ ಮೂಲಕ ಮಾಹಿತಿಯನ್ನು ಪ್ರಸಾರ ಮಾಡುತ್ತಿದೆ. ಸೈಬರ್ ವಂಚನೆಯ ಬಗ್ಗೆ ತಕ್ಷಣವೇ ಉಚಿತ ಸಹಾಯವಾಣಿ ಸಂಖ್ಯೆ, 1930 ಮೂಲಕ ವರದಿ ಮಾಡುವಂತೆ ಅವರು ಸಾರ್ವಜನಿಕರನ್ನು ಒತ್ತಾಯಿಸಿದರು.
ಸಾರ್ವಜನಿಕರನ್ನು ವಂಚಿಸಲು" "ನಕಲಿ ಸಿಮ್ ಕಾರ್ಡ್" ಮತ್ತು ಬ್ಯಾಂಕ್ ಖಾತೆಗಳನ್ನು ಮಾರಾಟ ಮಾಡುವ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಗುಂಪುಗಳನ್ನು ಗುರುತಿಸಲಾಗಿದೆ. ಈ ಅಪರಾಧಗಳಿಗೆ ಸಂಬಂಧಿಸಿದ 268 ಫೇಸ್‌ಬುಕ್ ಗುಂಪುಗಳು, 465 ಟೆಲಿಗ್ರಾಮ್ ಗುಂಪುಗಳು, 15 ಇನ್‌ಸ್ಟಾಗ್ರಾಮ್ ಖಾತೆಗಳು ಮತ್ತು 61 ವಾಟ್ಸಾಪ್ ಗುಂಪುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ವಿವಿಧ ರೀತಿಯ ಸೈಬರ್ ವಂಚನೆಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತಿದೆ ಎಂದು ಪರಮೇಶ್ವರ್ ಇದೇ ವೇಳೆ ತಿಳಿಸಿದರು.
Advertisement