
ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಹಲವು ಯಶೋಗಾಥೆಗಳಿಗೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಮನೆಯ ಯಜಮಾನಿಯರಿಗೆ ಸಿಗುತ್ತಿರುವ ಈ ಯೋಜನೆಯ 2000 ರೂಪಾಯಿ ಹಣದಿಂದ ಹಲವರು ತಮ್ಮ ಬದುಕಿನಲ್ಲಿ ಬದಲಾವಣೆಗೆ ಕಾರಣವಾಗಿದೆ. ಇದೀಗ ಅತ್ತೆ-ಸೊಸೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬೋರ್‌ವೆಲ್ ಕೊರೆಸಿ ಯಶಸ್ಸು ಕಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಒಂದಲ್ಲ ಒಂದು ರೀತಿಯಲ್ಲಿ ಆಗಾಗ ಸುದ್ದಿಯಾಗುತ್ತಿದೆ. ಈಗ ಅತ್ತೆ -ಸೊಸೆ ಸೇರಿಕೊಂಡು ಗೃಹಲಕ್ಷ್ಮೀ ದುಡ್ಡನ್ನು ಕೂಡಿಟ್ಟು ಕೃಷಿ ಭೂಮಿಗೆ ಬೋರ್ ವೆಲ್ ಕೊರೆಸಿ ಸಮೃದ್ಧಿಯಾಗಿ ನೀರು ಪಡೆದಿದ್ದಾರೆ. ಈ ಬಗ್ಗೆ ಖುದ್ದು ಅತ್ತೆ ಮಾಬುಬೀ ಮಾತನಾಡಿ ಪ್ರತಿ ತಿಂಗಳು ನಮಗೆ ಬರುತ್ತಿದ್ದ ಗೃಹಲಕ್ಷ್ಮೀ ದುಡ್ಡನ್ನು ಕೂಡಿಟ್ಟ ಒಟ್ಟು 44 ಸಾವಿರ ರೂಪಾಯಿ ಹಾಗೂ ಮಗ 10 ಸಾವಿರ ರೂಪಾಯಿ ಹಾಕಿ ಕೃಷಿ ಭೂಮಿಗೆ ಬೋರ್‌ವೆಲ್ ಕೊರೆಸಿದ್ದೇವೆ. ಇದೆಲ್ಲವೂ ಸಿದ್ದರಾಮಯ್ಯ ಅವರಿಂದಲೇ ಆಗಿದ್ದು ಎಂದಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಈ ಒಂದು ಸನ್ನಿವೇಶ ನಡೆದಿದೆ.ಇನ್ನು ಮಾಬುಬೀ ಅವರು ಮಾತನಾಡಿದ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಿಎಂ ,ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ – ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ - ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ. ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಂತೃಪ್ತಭಾವ ಮೂಡಿಸಿದೆ. ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಅತ್ತೆ - ಸೊಸೆಯ ನಡುವೆ ಜಗಳ ಆರಂಭವಾಗುತ್ತದೆ, ಸಂಸಾರಗಳು ಒಡೆಯುತ್ತವೆ ಎಂದು ಟೀಕಿಸಿದ ಜನರಿಗೆ ಬಾರಿಸಿದ ತಪರಾಕಿ ಇದು. ಬೆಳಕಿಗೆ ಬಾರದ ಇಂತಹ ಇನ್ನೂ ಸಾವಿರಾರು ಯಶೋಗಾಥೆಗಳಿವೆ, ಗೃಹಲಕ್ಷ್ಮಿ ನಾಡಿನ ತಾಯಂದಿರ ಬಾಳಿಗೆ ಅಕ್ಷರಶಃ ಭಾಗ್ಯಲಕ್ಷ್ಮಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದ್ದಾರೆ.
Advertisement