

ಬೆಂಗಳೂರು: ಮಾದಕ ವಸ್ತು ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದ್ದು, ಆಕೆಯ ಬಳಿ ಇದ್ದ ಅಂದಾಜು 24 ಕೋಟಿ ರೂ ಮೌಲ್ಯದ 12 ಕೆಜಿ ನಿಷೇಧಿತ ಎಂಡಿಎಂಎ ಹರಳುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಇದುವರೆಗೆ ವಶಪಡಿಸಿಕೊಂಡ ಅತಿದೊಡ್ಡ ಮಾದಕ ವಸ್ತು ಪ್ರಮಾಣ ಇದಾಗಿದೆ ಎಂದು ಬೆಂಗಳೂರು ಪೊಲೀಸ್‌ನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಘಟಕ ಹೇಳಿದೆ.
ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಸಿ ಪಾಳ್ಯ ಪ್ರದೇಶದಲ್ಲಿ ವಾಸವಿದ್ದ ಶಂಕಿತ ಮಹಿಳೆಯ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ.
ಈ ಮಾಹಿತಿ ಆಧರಿಸಿ ಡಿಸೆಂಬರ್ 13ರಂದು ಸಿಸಿಬಿ ತಂಡ ದಾಳಿ ನಡೆಸಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಿತ್ತು.
"ಸಿಸಿಬಿ ತಂಡದ ನಾರ್ಕೋಟಿಕ್ಸ್ ಕಂಟ್ರೋಲ್ ವಿಂಗ್ ಎಂಡಿಎಂಎ ಕ್ರಿಸ್ಟಲ್ ಡ್ರಗ್ ಜಾಲವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಇದು ಅಂತರರಾಷ್ಟ್ರೀಯ ಜಾಲವಾಗಿದೆ. ಅವರು 12 ಕೆಜಿ ಶುದ್ಧ ಬಿಳಿ ಮತ್ತು ಹಳದಿ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ಮೌಲ್ಯ ಅಂದಾಜು 24 ಕೋಟಿ ರೂಪಾಯಿ. ಬೆಂಗಳೂರು ಮತ್ತು ಕರ್ನಾಟಕದಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಮಾದಕ ವಸ್ತು ಪ್ರಮಾಣ ಇದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.
ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯದಲ್ಲಿ ನೆಲೆಸಿರುವ ವಿದೇಶಿ ಮಹಿಳೆಯೊಬ್ಬರು ಆಫ್ರಿಕನ್ ಪ್ರಜೆಗಳ ಆಹಾರ ಮತ್ತು ದಿನಸಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯನ್ನು ತೆರೆದಿರುವ ಬಗ್ಗೆ ಸಿಸಿಬಿಯ ನಾರ್ಕೋಟಿಕ್ಸ್ ಕಂಟ್ರೋಲ್ ವಿಭಾಗಕ್ಕೆ ಮಾಹಿತಿ ಲಭಿಸಿದೆ.
"ಇದರ ಜೊತೆಗೆ, ಆಕೆ ಅಕ್ರಮ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಸಿಸಿಬಿ ನಾರ್ಕೋಟಿಕ್ಸ್ ತಂಡವು ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು, ವಿವರಗಳನ್ನು ಪಡೆದರು ಮತ್ತು 12 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ನಾವು ಡ್ರಗ್ಸ್ ಸರಬರಾಜು ಮಾಡಿದವರನ್ನು ಹುಡುಕುತ್ತಿದ್ದೇವೆ" ಎಂದು ಅವರು ಹೇಳಿದರು.
ಮುಂಬೈನಿಂದ ನಿಷೇಧಿತ ಡ್ರಗ್ಸ್ ಅನ್ನು ಸಾಬೂನು ಪ್ಯಾಕ್, ಒಣಮೀನು ಬಾಕ್ಸ್ ಇತ್ಯಾದಿಗಳಲ್ಲಿ ತಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆಕೆ ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವಿದೇಶಿಗರು ಮತ್ತು ಇತರರಿಗೆ ಹೆಚ್ಚಿನ ಬೆಲೆಗೆ ಇಲ್ಲಿ ಸರಬರಾಜು ಮಾಡುತ್ತಿದ್ದರು.
ಒಟ್ಟು 12 ಕೆಜಿ ಎಂಡಿಎಂಎ ಹರಳುಗಳು, ಮೊಬೈಲ್ ಫೋನ್‌ಗಳು ಮತ್ತು 70 ಏರ್‌ಟೆಲ್ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುಂಬೈ ಮೂಲದ ಮಹಿಳೆಯೊಬ್ಬರು ಬಂಧಿತ ವಿದೇಶಿ ಪ್ರಜೆಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂದು ತಿಳಿದುಬಂದಿದೆ.
ಹೆಚ್ಚಿನ ಬೆಲೆಗೆ ಮಾದಕ ದ್ರವ್ಯ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದೆ ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಶಂಕಿತ ವ್ಯಕ್ತಿ ಐದು ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದು, ಇದೀಗ ವೀಸಾ ಅವಧಿಯೂ ಮುಗಿದಿದ್ದು, ಮುಂಬೈ ಮಹಿಳೆಯ ಗುರುತು ಪತ್ತೆಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಅವರು 70 ಸಿಮ್ ಕಾರ್ಡ್‌ಗಳನ್ನು ಏಕೆ ಹೊಂದಿದ್ದಾರೆಂದು ಅರ್ಥಮಾಡಿಕೊಳ್ಳಲು ಮತ್ತು ಅವರು ಎಲ್ಲಿಂದ ಡ್ರಗ್ಸ್ ಪಡೆಯುತ್ತಿದ್ದಾರು ಎಂಬುದನ್ನು ಕಂಡುಹಿಡಿಯಬೇಕಿದೆ”ಎಂದು ದಯಾನಂದ್ ಹೇಳಿದರು.
ಎನ್‌ಡಿಪಿಎಸ್ ಆಕ್ಟ್ ಮತ್ತು ಫಾರಿನರ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿರುವ ಇತರ ವಿದೇಶಿ ಪ್ರಜೆಯನ್ನು ಬಂಧಿಸಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement