ಲೋಕ ಅದಾಲತ್: ಸಂಧಾನ ಮೂಲಕ 38 ಲಕ್ಷ ಪ್ರಕರಣ ಇತ್ಯರ್ಥ; 2,248 ಕೋಟಿ ರೂ ಪರಿಹಾರ ಪಾವತಿ
ಬೆಂಗಳೂರು: ಡಿಸೆಂಬರ್ 14ರಂದು ರಾಜ್ಯಾದ್ಯಂತ ನಡೆದ ಲೋಕ ಅದಾಲತ್‌ನಲ್ಲಿ 38 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಂಡಿವೆ.
ಈ ಕುರಿತಂತೆ ಹೈಕೋರ್ಟ್ನ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ಅವರು, ಡಿಸೆಂಬರ್ 14 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ರಾಜ್ಯಾದ್ಯಂತ ಒಂದೇ ದಿನದಲ್ಲಿ ಸೌಹಾರ್ದಯುತವಾಗಿ ಒಟ್ಟು 38.80 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು 2,248 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಹೈಕೋರ್ಟ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸೇರಿ 2,45,189 ಬಾಕಿ ಪ್ರಕರಣಗಳು ಮತ್ತು 36,35,692 ವ್ಯಾಜ್ಯ ಪೂರ್ವ ಪ್ರಕರಣಗಳೂ ಸೇರಿದಂತೆ 38,80,881 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹೇಳಿದರು.
ಅದಾಲತ್‌ನಲ್ಲಿ ಒಟ್ಟು 1,581 ವಿಚ್ಛೇದನ ಪ್ರಕರಣಗಳ ವಿಚಾರಣೆ ನಡೆಸಿದ್ದು, ಅದರಲ್ಲಿ 307 ಪ್ರಕರಣಗಳಲ್ಲಿ ದಂಪತಿ ಮತ್ತೆ ಒಂದಾಗಿದ್ದಾರೆ. ಇನ್ನುಳಿದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಇನ್ನುಳಿದಂತೆ 3,311 ವಿಭಾಗ ಧಾವೆ ಪ್ರಕರಣಗಳು,5,168 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು ಇತ್ಯರ್ಥಗೊಂಡಿದ್ದು, 260 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಅಲ್ಲದೆ, ಚೆಕ್ ಬೌನ್ಸ್ ಆರೋಪದ 11,262 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಭೂಸ್ವಾಧೀನ ಕುರಿತು 597 ಪ್ರಕರಣಗಳ ಇತ್ಯರ್ಥಪಡಿಸಿ, 773 ಕೋಟಿ ರೂ. ಪರಿಹಾರ ನೀಡಲಾಗಿದೆ. ಅಮಲ್ಜಾರಿ ಪ್ರಕರಣಗಳಲ್ಲಿ 3,432 ಕೇಸ್ಗಳನ್ನು ಇತ್ಯರ್ಥ ಮಾಡಿ, 82 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ರೇರಾಗೆ ಸಂಬಂಧಿಸಿದ 82 ಪ್ರಕರಣಗಳು ಇತ್ಯರ್ಥಗೊಂಡಿದ್ದು, 5 ಕೋಟಿ ರೂ. ಪರಿಹಾರ ನೀಡಲಾಗಿದೆ. ಗ್ರಾಹಕ ವ್ಯಾಜ್ಯಗಳ ಕುರಿತ 611 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 3 ಕೋಟಿ ರೂ. ಪರಿಹಾರ ವಿತರಣೆ ಮಾಡಿರುವುದಾಗಿ ಮಾಹಿತಿ ನೀಡಿದರು.
ಬೆಂಗಳೂರು ನಗರ ಜಿಲ್ಲೆಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 26 ವರ್ಷಗಳ ಹಿಂದಿನ ಕಳ್ಳತನ ಪ್ರಕರಣ ಇತ್ಯರ್ಥವಾಗಿದ್ದು, ಕೋಲಾರದಲ್ಲಿ ಆಸ್ತಿ ವಿವಾದ ಪ್ರಕರಣವನ್ನು 1 ಕೋಟಿ ರೂ ಗಳಿಗೆ ಇತ್ಯರ್ಥ ಪಡಿಸಲಾಗಿದೆ. ಮುಂದಿನ ಲೋಕ ಅದಾಲತ್ ಮಾರ್ಚ್ 8, 2025 ರಂದು ನಡೆಯಲಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ