
ಕನ್ನಡಿಗರು, ಬೆಂಗಳೂರು ಕುರಿತಂತೆ ಉತ್ತರ ಭಾರತೀಯರ ಹೇಳಿಕೆಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಅದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ದೆಹಲಿ ಮೂಲದ ಯುವತಿಯೋರ್ವಳು ಬೆಂಗಳೂರು ಆಗಿದ್ದು ಉತ್ತರ ಭಾರತೀಯರಿಂದಾಗಿ ಎಂದು ಹೇಳಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೋರ್ವ ಮೈಕ್ ಹಿಡಿದು ಬೆಂಗಳೂರಿನಲ್ಲಿ ನಿಮಗೆ ಶಾಕಿಂಗ್ ಅನಿಸಿದ ಕಲ್ಚರ್ ಯಾವುದು ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸಿದ ಯುವತಿ, ನನಗೆ ಇಲ್ಲಿನ ಸಂಸ್ಕೃತಿಯ ಬಗ್ಗೆ ಏನು ಶಾಕ್ ಆಗಿಲ್ಲ, ಆದರೆ ಇಲ್ಲಿನ ಜನರು ಮಾತ್ರ ಸುಖಾಸುಮ್ಮನೇ ಉತ್ತರ ಭಾರತೀಯರನ್ನು ದ್ವೇಷ ಮಾಡುತ್ತಾರೆ. ಹಿಂದಿ ಜನರು ಎಂದು ಕರೆದು ಪರಕೀಯರಂತೆ ನೋಡುತ್ತಾರೆ. ಆದರೆ ಬೆಂಗಳೂರು ಈ ಮಟ್ಟಿಗೆ ಬೆಳೆದಿದ್ದೇ ಉತ್ತರ ಭಾರತೀಯರು ಇಲ್ಲಿಗೆ ಬಂದಿರುವುದರಿಂದ ಈ ಸತ್ಯವನ್ನು ಒಪ್ಪಿಕೊಳ್ಳಲು ಹೆಚ್ಚಿನವರು ತಯಾರಿಲ್ಲ ಎಂದು ಹೇಳಿದ್ದಾಳೆ. ಈ ಹೇಳಿಕೆ ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಆಕೆಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರೆ ಮತ್ತೆ ಕೆಲವರು ತೀವ್ರವಾಗಿ ವಿರೋಧಿಸಿದ್ದಾರೆ.
ಈ ಹಿಂದೆ ಸುಗಂಧ ಶರ್ಮ ಎಂಬ ಮಹಿಳೆ ಇದೇ ರೀತಿಯ ಹೇಳಿಕೆ ನೀಡಿದ್ದಳು. ನೀವು ಉತ್ತರ ಭಾರತೀಯರು ಬೆಂಗಳೂರು ತೊರೆಯಿರಿ ಎನ್ನುತ್ತೀರಿ, ನಾವು ಬೆಂಗಳೂರಿಂದ ಹೋದರೆ ಇಡೀ ಊರು ಖಾಲಿಯಾಗುತ್ತದೆ. ನಿಮ್ಮ ಎಲ್ಲ ಪಿಜಿಗಳೂ ಖಾಲಿಯಾಗುತ್ತವೆ ಮೊದಲು. ನಿಮಗೆ ಬರುವ ದುಡ್ಡು ನಿಂತು ಹೋಗುತ್ತದೆ. ಕೋರಮಂಗಲದ ಕ್ಲಬ್‌ಗಳೆಲ್ಲ ಖಾಲಿಯಾಗುತ್ತವೆ. ನೀವು ಅಲ್ಲಿ ನೋಡುವ ಪಂಜಾಬಿ ಹಾಡಿಗೆ ಕುಣಿಯುವ ಹುಡುಗಿಯರೆಲ್ಲ ನಿಮಗೆ ನೋಡಲು ಸಿಗುವುದೇ ಇಲ್ಲ ಎಂದು ಹೇಳಿದ್ದಳು. ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಸುಗಂಧ ಶರ್ಮಾ ತನ್ನ ಹೇಳಿಕೆಗೆ ಕ್ಷಮೆ ಸಹ ಕೇಳಿದ್ದಳು. ಆದರೆ ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಮಣಿದು ಆಕೆಯ ಕೆಲಸ ಮಾಡುತ್ತಿದ್ದ ಕಂಪನಿಯೂ ಆಕೆಯನ್ನು ಕೆಲಸದಿಂದ ತೆಗೆದು ಹಾಕಿತ್ತು.
Advertisement