
ಮೈಸೂರು: ಜನವರಿ ಎರಡನೇ ವಾರದಲ್ಲಿ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂದಿನ ಸಂಪುಟ ಸಭೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ಚಾಮರಾಜನಗರ ಜಿಲ್ಲೆಯ ಆದಿವಾಸಿಗಳು ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು 2002 ರಲ್ಲಿ ಬಿಳಿಗಿರಿರಂಗ ಬೆಟ್ಟದಲ್ಲಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು, ಸಂಪುಟ ಸಭೆ ನಡೆಸಿದ್ದರು.
ಸರ್ಕಾರದ ನಿರ್ಧಾರ ಹಿನ್ನೆಲೆಯಲ್ಲಿ ಶಿಲ್ಪಾ ನಾಗ್ ಅವರು ಹನೂರಿನಲ್ಲಿ ಸಭೆ ನಡೆಸಿ, ಸ್ಥಳೀಯ ಅಧಿಕಾರಿಗಳ ಪ್ರತಿಕ್ರಿಯೆ, ಪ್ರದೇಶದ ಸಮಸ್ಯೆಗಳನ್ನು ಪಟ್ಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.
ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುವ ಮತ್ತು ಉದ್ಯೋಗವನ್ನು ಸೃಷ್ಟಿಸುವ ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಿಲ್ಲಾಡಳಿತ ಮಂಡಳಿಯರು ಸರ್ಕಾರವನ್ನು ಒತ್ತಾಯಿಸುವ ಸಾಧ್ಯತೆಗಳಿವೆ.
ಜಿಲ್ಲೆಯು ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಸ್ವಾಮಿ ದೇವಸ್ಥಾನ ಮತ್ತು ಗೋಪಾಲಸ್ವಾಮಿ ದೇವಸ್ಥಾನಗಳಂತಹ ಪ್ರಮುಖ ದೇವಾಲಯಗಳನ್ನು ಹೊಂದಿದ್ದು, ಈ ಮೂರೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬರುವುದರಿಂದ, ಪ್ರವಾಸಿಗರ ಸೆಳೆಯುತ್ತಿದೆ.
50 ರಷ್ಟು ಅರಣ್ಯ ಹೊಂದಿರುವ ಜಿಲ್ಲೆಯಲ್ಲಿರುವ ಜನರು ಮಾನವ-ಪ್ರಾಣಿ ಸಂಘರ್ಷದಿಂದ ತತ್ತರಿಸಿದ್ದು, ಅರಣ್ಯಕ್ಕೆ ಬೇಲಿ ಹಾಕುವ ಅಗತ್ಯವಿದೆ. ಜಿಲ್ಲೆಯು ಕನಿಷ್ಠ ನೀರಾವರಿಯನ್ನು ಹೊಂದಿರುವುದರಿಂದ ಮತ್ತು ಒಣ ಭೂಮಿಯಿಂದ ಆವೃತವಾಗಿರುವುದರಿಂದ ಏತ ನೀರಾವರಿ ಯೋಜನೆಗಳಿಗೆ ಒತ್ತು ನೀಡುವ ಅವಶ್ಯಕತೆಯಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಜಿಲ್ಲಾಡಳಿತ ಒತ್ತಾಯಿಸುವ ಸಾಧ್ಯತೆಗಳಿವೆ.
ಜಿಲ್ಲಾಧಿಕಾರಿ ಸಭೆ ನಡೆಸಿದ ಬಳಿಕ ಸಂಪುಟ ಸಭೆಯ ಸಿದ್ಧತೆಗಳು ಆರಂಭವಾಗಲಿವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳಿಗೆ ಕಚೇರಿಗಳ ಸ್ಥಾಪಿಸವ ಕಾರ್ಯಗಳು ಆರಂಭವಾಗಲಿದೆ ಎನ್ನಲಾಗಿದೆ.
Advertisement