
ಬೀದರ್: ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ರಾಜು ಕಪನೂರು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಬೀದರ್‌ನ 26 ವರ್ಷದ ಗುತ್ತಿಗೆದಾರನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಗಾಂಧಿ ಗುಂಜ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಲೋಪವೆಸಗಿದ್ದ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸಂತ್ರಸ್ತನ ಕುಟುಂಬವು ದೂರು ನೀಡಲೆಂದು ಪೊಲೀಸ್ ಠಾಣೆಗೆ ತೆರಳಿದರೂ ದೂರನ್ನು ದಾಖಲಿಸಿಕೊಳ್ಳದ ಕಾರಣದಿಂದಾಗಿ ರಾಜೇಶ್ ಚೆಲ್ವಾ ಮತ್ತು ಶಾಮಲಾ ಎಂಬುವವರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.
'ದೂರು ತೆಗೆದುಕೊಂಡು ಎಫ್‌ಐಆರ್ ದಾಖಲಿಸುವ ಬದಲು, ಹೆಡ್ ಕಾನ್‌ಸ್ಟೆಬಲ್‌ಗಳು ಸಂತ್ರಸ್ತ ಕಟ್ಟಿ ತೂಗಾಂವ್ ಗ್ರಾಮಕ್ಕೆ ಸೇರಿದವ ಎಂದು ತಿಳಿದ ಬಳಿಕ ಧನ್ನೂರು ಠಾಣೆಗೆ ಭೇಟಿ ನೀಡುವಂತೆ ಕುಟುಂಬಕ್ಕೆ ಸೂಚಿಸಿದ್ದಾರೆ. ಹೀಗಾಗಿ ಕರ್ತವ್ಯ ಲೋಪವೆಸಗಿದ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ಆತ್ಮಹತ್ಯೆ ಮಾಡಿಕೊಂಡ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಸಚಿನ್ ಪಾಂಚಾಲ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗುತ್ತಿಗೆ ಪಡೆದಿದ್ದರು.
ತನ್ನ ಸಾವಿಗೆ ಮಾಜಿ ಪುರಸಭಾ ಸದಸ್ಯ ರಾಜು ಕಪನೂರ ಸೇರಿ ಏಳು ಮಂದಿ ಕಾರಣ ಎಂದು ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ. ಕಪನೂರ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರು ಎಂದು ವರದಿಯಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಖರ್ಗೆ, ಈ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದು, ಸತ್ಯಾಸತ್ಯತೆ ಹೊರಬರಲು ವೈಯಕ್ತಿಕವಾಗಿ ತನಿಖೆಗೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
Advertisement