ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆ; ಎಂಜಿ ರೋಡ್ ಮತ್ತಿತರ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಪ್ರದೇಶಗಳನ್ನು ನಾವು ಗುರುತಿಸಿದ್ದೇವೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಜಂಕ್ಷನ್, ಕೋರಮಂಗಲ, ಇಂದಿರಾನಗರ ಮತ್ತಿತರ ಕಡೆಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
 B Dayananda
ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್
Updated on

ಬೆಂಗಳೂರು: ನೂತನ ವರ್ಷ 2025ಕ್ಕೆ ಕೆಲವೇ ದಿನಗಳು ಬಾಕಿಯಿರುವಂತೆಯೇ ನಗರದ ಪೊಲೀಸರು ಹೊಸ ವರ್ಷ ಸಂಭ್ರಮಾಚರಣೆಗಾಗಿ ಜನರು ಹೆಚ್ಚಾಗಿ ಸೇರುವ ಕಡೆಗಳಲ್ಲಿ ಜನರು ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ಬಿಗಿ ಭದ್ರತೆ ನಿಯೋಜನೆಯೊಂದಿಗೆ ವ್ಯಾಪಕವಾದ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಪ್ರತಿ ವರ್ಷದಂತೆ ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹಿಂದಿನ ವರ್ಷದ ಘಟನೆಗಳು ಮತ್ತು ಅನುಭವದ ಆಧಾರದ ಮೇಲೆ ಹೆಚ್ಚಿನ ಭದ್ರತೆ ಕೈಗೊಂಡಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಪ್ರದೇಶಗಳನ್ನು ನಾವು ಗುರುತಿಸಿದ್ದೇವೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಜಂಕ್ಷನ್, ಕೋರಮಂಗಲ, ಇಂದಿರಾನಗರ ಮತ್ತಿತರ ಕಡೆಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ, ಮೆಟ್ರೋ ಮತ್ತು ಇತರ ಸಂಸ್ಥೆಗಳೊಂದಿಗೆ ಸಭೆ, ಚರ್ಚೆಗಳನ್ನು ನಡೆಸಲಾಗಿದೆ. ರಾತ್ರಿ ಹೊತ್ತಿನಲ್ಲಿ ದೀಪಾಲಂಕಾರ, ಬ್ಯಾರಿಕೇಡ್‌ ಹಾಕಲು ಹಾಗೂ ಮೆಟ್ರೊ ಸೇವೆಗೆ ಮನವಿ ಮಾಡಲಾಗಿದೆ. ಓಲಾ ಮತ್ತು ಉಬರ್‌ನ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಾಗಿದೆ ಮತ್ತು ಪಿಕಪ್ ಸ್ಥಳಗಳನ್ನು ವ್ಯವಸ್ಥೆ ಮಾಡಲಾಗಿದೆ. ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸದಂತೆ ನೋಡಿಕೊಳ್ಳಲು ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಏಕಮುಖ ಪಾದಚಾರಿ ರಸ್ತೆ ಇರಲಿದೆ. ಜನರು ಕಾವೇರಿ ಎಂಪೋರಿಯಂನಿಂದ ಒಪೆರಾ ಜಂಕ್ಷನ್‌ಗೆ ನಡೆಯಬಹುದು ಆದರೆ, ಎದುರುಗಡೆಯಿಂದ ಬರಲು ಅವಕಾಶವಿಲ್ಲ. ಯಾವುದೇ ರೀತಿಯ ಮುಖವಾಡ ಧರಿಸದಂತೆ ಜನರಲ್ಲಿ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.

ಹೊಸ ವರ್ಷಾಚರಣೆಗಾಗಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ ಮತ್ತಿತರ ಕಡೆಗಳಲ್ಲಿ ಜನರು, ಮೋಟಾರು ವಾಹನಗಳು, ಪಾದಚಾರಿಗಳು ಹೆಚ್ಚಾಗಿ ಸೇರುವುದರಿಂದ ಜನರ ಸುರಕ್ಷತೆ ದೃಷ್ಟಿಯಿಂದ ಈ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬ್ರಿಗೇಡ್ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್ ನಿಂದ ಓಪೆರಾ ಜಂಕ್ಷನ್ ವರೆಗೂ ಮಾತ್ರ ಜನರು ಸಂಚರಿಸಬಹುದಾಗಿದೆ. ಎದುರುಗಡೆ ದಿಕ್ಕಿನಲ್ಲಿ ಹೋಗಲು ನಿರ್ಬಂಧಿಸಲಾಗಿದೆ.

ಎಂಜಿ ರಸ್ತೆಗೆ ಅವರು ವಾಪಸ್ ಬರಬೇಕಾದರೆ ರೆಸಿಡೆಸ್ಸಿ ರಸ್ತೆ (ಶಂಕರನಾಗ್ ಚಿತ್ರಮಂದಿರ) ಮಾರ್ಗವಾಗಿ ಬರಬಹುದು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ರೆಸಿಡೆನ್ಸಿ ರಸ್ತೆ ಮತ್ತು ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವ ಚಾಲಕರು/ಮಾಲೀಕರು ಡಿಸೆಂಬರ್ 31 ರಂದು ಸಂಜೆ 4 ಗಂಟೆಯೊಳಗೆ ತಮ್ಮ ವಾಹನಗಳನ್ನು ತೆರವುಗೊಳಿಸಬೇಕು.

ಟ್ರಾಫಿಕ್ ಪೊಲೀಸರ ಪ್ರಕಾರ, ಅಪಘಾತಗಳು ಮತ್ತಿತರ ಅಹಿತಕರ ಘಟನೆಯಾಗದಂತೆ ತಡೆಗಟ್ಟಲು ಡಿಸೆಂಬರ್ 31 ರಂದು ರಾತ್ರಿ 11 ರಿಂದ ಜನವರಿ 1, 2025 ರ ಬೆಳಿಗ್ಗೆ 6 ರವರೆಗೆ ನಗರದ ಎಲ್ಲಾ ಫ್ಲೈಓವರ್‌ಗಳಲ್ಲಿ (ಕೆಐಎ ವಿಮಾನ ನಿಲ್ದಾಣಕ್ಕೆ ಹೋಗುವ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಹೊರತುಪಡಿಸಿ) ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸಲಾಗಿದೆ. KIA ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿ, ದ್ವಿಚಕ್ರ ವಾಹನಗಳ ಸಂಚಾರವನ್ನು ಡಿಸೆಂಬರ್ 31, 2024ರ ರಾತ್ರಿ 10 ಗಂಟೆಯಿಂದ ಜನವರಿ 1, 2025ರ ಬೆಳಗ್ಗೆ 6 ಗಂಟೆಯವರೆಗೂ ನಿರ್ಬಂಧಿಸಲಾಗಿದೆ.

ರಾತ್ರಿಯಿಡೀ ಮದ್ಯ ಸೇವಿಸಿ ವಾಹನ ಚಲಾಯಿಸುವ, ಮಾದಕ ದ್ರವ್ಯ ಸೇವಿಸಿದ ಪ್ರಯಾಣಿಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಲು ನಗರದ ವಿವಿಧ ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸುವಂತಹ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 B Dayananda
2025 ಹೊಸ ವರ್ಷಾಚರಣೆ: Namma Metro ಸೇವೆ ಅವಧಿ ವಿಸ್ತರಣೆ

ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುವ, ವೀಲಿಂಗ್/ಡ್ರ್ಯಾಗ್ ರೇಸಿಂಗ್‌ನಲ್ಲಿ ಭಾಗವಹಿಸಿ ಇತರರಿಗೆ ನಾನುಕೂಲತೆ ಮತ್ತು ತೊಂದರೆ ಉಂಟುಮಾಡುವ ದ್ವಿಚಕ್ರವಾಹನ ಸವಾರರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಂತಹ ಘಟನೆಗಳು ಕಂಡುಬಂದಲ್ಲಿ, ಪೊಲೀಸ್ ಸಹಾಯವಾಣಿ ಸಂಖ್ಯೆ: 112 ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ನಿಲುಗಡೆ ನಿಷೇಧಿತ ಪ್ರದೇಶಗಳಲ್ಲಿ ನಿಲುಗಡೆ ಮಾಡಿದ ವಾಹನಗಳನ್ನು ಮತ್ತು ಸಂಚಾರಕ್ಕೆ ಅಡ್ಡಿಯುಂಟುಮಾಡುವ ವಾಹನಗಳನ್ನು ತೆಗೆದುಕೊಂಡು ಹೋಗಲಾಗುವುದು, ಹೊಸ ವರ್ಷಾಚರಣೆಗೆ ಸಾರ್ವಜನಿಕ ಸಾರಿಗೆ ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com