
ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 35 ವರ್ಷದ ಪತ್ನಿಯನ್ನು ಪತಿಯೇ ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಅತ್ತಿಬೆಲೆಯ ಮೇಡಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಆರೋಪಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ಬಿಹಾರ ಮೂಲದ ಮಲ್ಲಿಕಾ ಕಟೂನ್ ಎಂದು ಗುರುತಿಸಲಾಗಿದೆ. ಆರೋಪಿ ಮಹಮ್ಮದ್ ಸೈಯದ್ ಅನ್ಸಾರಿ (40) ಬಡಗಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ 15 ವರ್ಷಗಳಿಂದ ನಗರದಲ್ಲಿ ವಾಸವಿದ್ದ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಮೂವರು ಅಪ್ರಾಪ್ತ ಮಕ್ಕಳಿದ್ದಾರೆ.
ಮಕ್ಕಳ ವಿದ್ಯಾಭ್ಯಾಸ ಮತ್ತು ಹಣಕಾಸಿನ ವಿಚಾರದಲ್ಲಿ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು. ಮಲ್ಲಿಕಾ ನಡತೆ ಬಗ್ಗೆ ಅನ್ಸಾರಿಗೆ ಅನುಮಾನವಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ದಂಪತಿ ನಡುವೆ ತೀವ್ರ ಜಗಳ ನಡೆದಿದೆ. ಬಳಿಕ ಮಲ್ಲಿಕಾ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಕಬ್ಬಿಣದ ಸುತ್ತಿಗೆಯಿಂದ ಆಕೆಯ ತಲೆಗೆ ಪತಿ ಹೊಡೆದಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾಳೆ. ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಅನ್ಸಾರಿಯನ್ನು ಬಂಧಿಸಿದ್ದಾರೆ.
Advertisement