
ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವುದಾಗಿ ಹೇಳಿ ಅಭ್ಯರ್ಥಿಗಳಿಂದ 50 ಲಕ್ಷ ರೂ. ವಸೂಲಿ ಮಾಡಿದ ಆರೋಪದ ಮೇಲೆ ಪೊಲೀಸರು ರೈಲ್ವೆ ಟಿಕೆಟ್ ಮುಖ್ಯ ಇನ್‌ಸ್ಪೆಕ್ಟರ್‌ನನ್ನು ಬಂಧಿಸಿದ್ದಾರೆ.
ಆರೋಪಿಯನ್ನು 49 ವರ್ಷದ ಗೋವಿಂದರಾಜು ಎಂದು ಗುರುತಿಸಲಾಗಿದ್ದು, ನೈಋತ್ಯ ರೈಲ್ವೆಯಲ್ಲಿ ರೈಲ್ವೆ ಟಿಕೆಟ್ ಮುಖ್ಯ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯನಗರ ಪೊಲೀಸರು ಬಿಎನ್‌ಎಸ್ ಕಾಯ್ದೆಯ ಸೆಕ್ಷನ್‌ಗಳಾದ 318 (4), 61 (1) (ಎ), ಮತ್ತು 3 (5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆರೋಪಿ ಗೋವಿಂದರಾಜು ಹಾಗೂ ಇತರರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯ ಪಿಎಸ್‌ಐ ಭೀಮಾಶಂಕರ ಹೇರೂರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಎಸ್. ಗಿರೀಶ್ ಮಾತನಾಡಿ, 'ಪಿಎಸ್ಐ ಭೀಮಾಶಂಕರ ಹೇರೂರು ಮತ್ತು ಹೆಡ್ ಕಾನ್‌ಸ್ಟೆಬಲ್ ಗಿರೀಶ್ ಕುಮಾರ್ ಟಿ.ಎನ್ ಅವರು ಮೂಲದಿಂದ ಮಾಹಿತಿ ಪಡೆದಿದ್ದಾರೆ. ನೈಋತ್ಯ ರೈಲ್ವೆಯಲ್ಲಿ ಮುಖ್ಯ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಗೋವಿಂದರಾಜು ಎಂಬುವವರು ಕೆಎಎಸ್, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳನ್ನು ಮಧ್ಯವರ್ತಿಗಳ ಮೂಲಕ ಸಂಪರ್ಕಿಸುತ್ತಿದ್ದರು. ಹಣ ನೀಡಿದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.
ಈ ಸುಳಿವು ದೊರೆತ ಮೇಲೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಮಾಹಿತಿ ದೃಢೀಕರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಡಿಸೆಂಬರ್ 28ರಂದು ರಾತ್ರಿ 9 ಗಂಟೆ ಸುಮಾರಿಗೆ ವಿಜಯನಗರ 4ನೇ ಕ್ರಾಸ್‌ನಲ್ಲಿರುವ ರಮೇಶ್ ಎಂಬುವವರ ನಿವಾಸದಲ್ಲಿ ಆರೋಪಿ ಗೋವಿಂದರಾಜು ಇರುವುದು ತಿಳಿದುಬಂದಿದೆ. ನಂತರ ಸ್ಥಳಕ್ಕಾಗಮಿಸಿದ ಪಿಎಸ್‌ಐ ಭೀಮಾಶಂಕರ್ ಮತ್ತು ಗಿರೀಶ್ ಕುಮಾರ್, ರಮೇಶ್ ಅವರ ಮನೆಯಿಂದ ಹೋಗುತ್ತಿದ್ದ ಗೋವಿಂದರಾಜುನನ್ನು ಹಿಂಬಾಲಿಸಿ, ಬಂಧಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.
ಮೊಬೈಲ್ ಫೋನ್ ತೋರಿಸಲು ಕೇಳಿದಾಗ, ಗೋವಿಂದರಾಜು ಪರಾರಿಯಾಗಲು ಯತ್ನಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ, ಅವರ ಬಳಿ ನಾಲ್ಕು ಮೊಬೈಲ್ ಫೋನ್‌ಗಳು ಇರುವುದು ಕಂಡುಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಿಲ್ಲ. ಹೆಚ್ಚಿನ ತನಿಖೆಗಾಗಿ ಅವರನ್ನು ಠಾಣೆಗೆ ಕರೆದೊಯ್ಯಲಾಗಿದೆ ಮತ್ತು ವಿಚಾರಣೆ ವೇಳೆ 2018ರಲ್ಲಿ ಸಿಸಿಬಿ ಕಚೇರಿಯಲ್ಲಿ ದಾಖಲಾಗಿರುವ ಪರೀಕ್ಷಾ ವಂಚನೆ ಪ್ರಕರಣದಲ್ಲಿ ಗೋವಿಂದರಾಜು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಮಧ್ಯವರ್ತಿಗಳ ಮೂಲಕ ಪಿಡಿಒ ಮತ್ತು ಕೆಎಎಸ್ ಪೂರ್ವಭಾವಿ ಪರೀಕ್ಷೆಗಳ ಅಭ್ಯರ್ಥಿಗಳನ್ನು ಸಂಪರ್ಕಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೆರವಾಗುವುದಾಗಿ ಭರವಸೆ ನೀಡಿದ್ದಾರೆ. ಪಿಡಿಒ ಹುದ್ದೆಗಳಿಗೆ 25 ಲಕ್ಷ ಮತ್ತು ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ 50 ಲಕ್ಷ ರೂ. ನಿಗದಿ ಮಾಡಿದ್ದಾಗಿ ತಿಳಿದುಬಂದಿದೆ.
ಒಎಂಆರ್ ಶೀಟ್‌ನಲ್ಲಿ ತಮಗೆ ತಿಳಿದ ಉತ್ತರಗಳನ್ನು ಭರ್ತಿ ಮಾಡಿ, ಉಳಿದವುಗಳನ್ನು ಖಾಲಿ ಬಿಡುವಂತೆ ಸೂಚಿಸಿ, ನಂತರ ಸರಿಯಾದ ಉತ್ತರಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆರೋಪಿ ಅಭ್ಯರ್ಥಿಗಳ ಪ್ರಮಾಣಪತ್ರಗಳು, ಪ್ರವೇಶ ಕಾರ್ಡ್‌ಗಳು ಮತ್ತು ಚೆಕ್‌ಗಳನ್ನು ಸಂಗ್ರಹಿಸುತ್ತಿದ್ದರು. ಫೋನ್‌ಗಳಲ್ಲಿ ಒಂದನ್ನು ಪರಿಶೀಲಿಸಿದಾಗ, ಅದರಲ್ಲಿ 46 ಹೆಸರುಗಳು ಮತ್ತು ಇತರ ದಾಖಲೆಗಳು ಪತ್ತೆಯಾಗಿವೆ ಎಂದು ಡಿಸಿಪಿ ತಿಳಿಸಿದ್ದಾರೆ.
ವಿಜಯನಗರದಲ್ಲಿ ನೆಲೆಸಿರುವ ರಮೇಶ್ ಅವರ ಮಗಳು ಕೆಎಎಸ್ ಪರೀಕ್ಷೆಗೆ ಹಾಜರಾಗಬೇಕಿತ್ತು. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುವ ಕುರಿತು ಚರ್ಚಿಸಲು ಗೋವಿಂದರಾಜು ಅಲ್ಲಿಗೆ ಭೇಟಿ ನೀಡಿದ್ದರು ಎಂದು ಅವರು ಹೇಳಿದರು.
'ಸರ್ಕಾರಿ ನೌಕರರಾಗಿರುವ ಗೋವಿಂದರಾಜು ಅವರು ಅಭ್ಯರ್ಥಿಗಳನ್ನು ಸಂಪರ್ಕಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವುದಾಗಿ ಮತ್ತು ಕೆಲಸ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದು, ಹೆಚ್ಚಿನ ಹಣ ಹಾಗೂ ದಾಖಲೆಗಳನ್ನು ಸಂಗ್ರಹಿಸುತ್ತಿದ್ದರು. ಈ ಪ್ರಕರಣದಲ್ಲಿ ಗೋವಿಂದರಾಜು, ಮಧ್ಯವರ್ತಿಗಳು ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಗಿರೀಶ್ ಹೇಳಿದ್ದಾರೆ.
Advertisement