Happy New Year 2025: ಬೆಂಗಳೂರು ಸೇರಿ ರಾಜ್ಯಾದ್ಯಂತ ಹುರುಪಿನಿಂದ ಹೊಸವರ್ಷಕ್ಕೆ ಸ್ವಾಗತ!
ಬೆಂಗಳೂರು: ಬೆಂಗಳೂರೂ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಯುವ ಜನತೆ ಹುರುಪಿನಿಂದ ಹೊಸವರ್ಷವನ್ನು ಬರ ಮಾಡಿಕೊಂಡಿತು. ನಗರಗಳ ಗಲ್ಲಿ ಗಲ್ಲಿಯಲ್ಲೂ ಪಾರ್ಟಿಯ ಗುಂಗು ರಂಗೇರಿತ್ತು. ಇಡೀ ದೇಶ 2024ಕ್ಕೆ ಗುಡ್‌ಬೈ ಹೇಳಿದ್ದು 2025 ಅನ್ನ ಭರ್ಜರಿಯಾಗಿ ಸ್ವಾಗತ ಮಾಡಿದರು. ಬೆಂಗಳೂರಿನ ಪ್ರಮುಖ ರಸ್ತೆ ಎಂ.ಜಿ ರೋಡ್ ಬ್ರಿಗೇಡ್ ರೋಡ್ ನಲ್ಲಿ ಯುವ ಸಮೂಹ ಬೀಡುಬಿಟ್ಟಿದ್ದು 12 ಗಂಟೆಯಾಗುತ್ತಿದ್ದಂತೆ ಕುಣಿದು ಕುಪ್ಪಳಿಸುತ್ತಾ ಹೊಸ ವರ್ಷವನ್ನು ಸ್ವಾಗತಿಸಿದರು.
ಯುವಕರು ಕುಡಿದು ಬೈಕ್ ವೀಲಿಂಗ್, ವೇಗದ ಚಾಲನೆ ಹಾಗೂ ಅಪಘಾತಗಳ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ರಾತ್ರಿ 11 ಗಂಟೆಯ ಬಳಿಕ ಬೆಂಗಳೂರು ನಗರದ ಬಹುತೇಕ ಎಲ್ಲಾ ಫ್ಲೈಓವರ್ ಗಳು ಬಂದ್ ಮಾಡಲಾಗಿತ್ತು. ಅದರಂತೆ ಸಂಗೊಳ್ಳಿ ರಾಯಣ್ಣ ಫ್ಲೈಓವರ್, ಶಿವನಗರ ಫ್ಲೈಓವರ್, ಯಶವಂತಪುರ ಫ್ಲೈಓವರ್, ಲೂಲು ಮಾಲ್ ಬಳಿಯ ಫ್ಲೈಓವರ್, ಮಾರ್ಕೆಟ್ ಫ್ಲೈಓವರ್ ಸೇರಿದಂತೆ ನಗರದ 40 ಫ್ಲೈಓವರ್ಗಳು ಬಂದ್ ಮಾಡಲಾಗಿದ್ದು ನಾಳೆ ಬೆಳಿಗ್ಗೆ 6 ಗಂಟೆಗೆ ಓಪನ್ ಆಗಲಿವೆ.
ಮತ್ತೊಂದೆಡೆ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಚರ್ಚ್ಸ್ಟ್ರೀಟ್ನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಹೆಚ್ಚು ಜನ ಸೇರುವ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದೇವೆ. ಸಿಸಿ ಕ್ಯಾಮರಾ ಮೂಲಕ ನಿಗಾ ವಹಿಸುತ್ತಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಹೇಳಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿದೆ. ಸಂಭ್ರಮಾಚರಣೆಯ ಖುಷಿಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸುವುದು ಕೂಡ ಅಗತ್ಯ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ