ಕಂದಾಯ ಇಲಾಖೆ ಎಲ್ಲಾ ಕಚೇರಿಗಳು ಶೀಘ್ರದಲ್ಲೇ ಡಿಜಿಟಲೀಕರಣಗೊಳ್ಳಲಿವೆ: ಸಚಿವ ಕೃಷ್ಣ ಭೈರೇಗೌಡ

ರಾಜ್ಯದ ಜನತೆಗೆ ತ್ವರಿತ ಮತ್ತು ಪಾರದರ್ಶಕ ಸೌಲಭ್ಯಗಳನ್ನು ಒದಗಿಸಲು ಕಂದಾಯ ಇಲಾಖೆ ಎಲ್ಲಾ ಕಚೇರಿಗಳನ್ನು ಶೀಘ್ರದಲ್ಲೇ ಡಿಜಿಟಲೀಕರಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಹೇಳಿದರು.
ಸಚಿವ ಕೃಷ್ಣ ಭೈರೇಗೌಡ
ಸಚಿವ ಕೃಷ್ಣ ಭೈರೇಗೌಡ
Updated on

ಬೆಳಗಾವಿ: ರಾಜ್ಯದ ಜನತೆಗೆ ತ್ವರಿತ ಮತ್ತು ಪಾರದರ್ಶಕ ಸೌಲಭ್ಯಗಳನ್ನು ಒದಗಿಸಲು ಕಂದಾಯ ಇಲಾಖೆ ಎಲ್ಲಾ ಕಚೇರಿಗಳನ್ನು ಶೀಘ್ರದಲ್ಲೇ ಡಿಜಿಟಲೀಕರಣಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ಕಂದಾಯ ಇಲಾಖೆಯಲ್ಲಿನ ಹಳೆಯ ದಾಖಲೆಗಳು ಶಿಥಿಲಾವಸ್ಥೆ ತಲುಪಿವೆ. ದಾಖಲೆ ಪಡೆಯಲು ಜನರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಆ ದಾಖಲೆಗಳನ್ನು ಶಾಶ್ವತವಾಗಿ ಸಂರಕ್ಷಿಸುವುದು ಮತ್ತು ನಕಲಿ ಸೃಷ್ಟಿಗೆ ತಡೆಯೊಡ್ಡುವ ಸಲುವಾಗಿ 31 ಜಿಲ್ಲೆಗಳ ತಲಾ ಒಂದು ತಾಲ್ಲೂಕಿನಲ್ಲಿ ಪ್ರಥಮ ಹಂತವಾಗಿ ಯೋಜನೆಗೆ ಚಾಲನೆ ಕೊಡಲಾಗುತ್ತಿದೆ. ಎಲ್ಲ ದಾಖಲೆಗಳನ್ನು 100 ದಿನಗಳಲ್ಲಿ ಡಿಜಿಟಲೀಕರಣ ಮಾಡಲಾಗುವುದು ಎಂದು ಹೇಳಿದರು.

ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಅಧೀನದಲ್ಲಿರುವ ಪ್ರಕರಣಗಳನ್ನು ಮೂರು ತಿಂಗಳೊಳಗೆ ಇತ್ಯರ್ಥಪಡಿಸಬೇಕು ಮತ್ತು ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಪ್ರಕರಣಗಳನ್ನು ಆರು ತಿಂಗಳೊಳಗೆ ಪರಿಹರಿಸಬೇಕು ಎಂದು ಇದೇ ವೇಳೆ ಸೂಚನೆ ನೀಡಿದರು.

‘ನಾನು ಕಂದಾಯ ಸಚಿವನಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ತಹಶೀಲ್ದಾರ್, ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿನ ಹೆಚ್ಚಿನ ಪ್ರಕರಣ ಬಾಕಿ ಇದ್ದವು. ಈಗ ತ್ವರಿತವಾಗಿ ಪ್ರಕರಣ ಇತ್ಯರ್ಥ ಮಾಡಲಾಗುತ್ತಿದೆ. ತಹಶೀಲ್ದಾರ್ ನ್ಯಾಯಾಲಯದಲ್ಲಿ ಬಾಕಿ ಇದ್ದ 2,215 ಪ್ರಕರಣಗಳಲ್ಲಿ ಈಗ 107 ಮಾತ್ರ ಉಳಿದಿವೆ. ಸಹಾಯಕ ಆಯುಕ್ತರ ನ್ಯಾಯಾಲಯಗಳಲ್ಲಿನ 60 ಸಾವಿಕ್ಕೂ ಅಧಿಕ ಪ್ರಕರಣಗಳಲ್ಲಿ 34,377 ಇತ್ಯರ್ಥವಾಗಿವೆ’ ಎಂದರು.

ಭೂಮಿಯನ್ನು ಸರ್ವೆ ಮಾಡಲು ಅಗತ್ಯವಿರುವ ಹೈಟೆಕ್ ಉಪಕರಣಗಳ ಕಿಟ್‌ಗಳನ್ನು ಪ್ರತಿ ತಾಲೂಕು ಆಡಳಿತಕ್ಕೆ ಒದಗಿಸಲಾಗುವುದು. ಭೂಮಾಪನ ನಡೆಸಲು ಸಿಬ್ಬಂದಿ ಕೊರತೆ ಇದೆ, ಆ ಕಾರ್ಯಕ್ಕೆ 1000ಕ್ಕೂ ಹೆಚ್ಚು ಭೂಮಾಪಕರನ್ನು ಶೀಘ್ರದಲ್ಲೇ ನೇಮಿಸಲಾಗುವುದು, ಮೊದಲ ಹಂತದಲ್ಲಿ 367 ಭೂಮಾಪಕರನ್ನು ನೇಮಿಸಲಾಗುವುದು.

ಸರ್ವೇಯರ್‌ಗಳ ನೇಮಕಾತಿಯನ್ನು ಕೆಪಿಎಸ್‌ಸಿ ಪರೀಕ್ಷೆ ಮೂಲಕ ಮಾಡಲಾಗುತ್ತಿದೆ. ಖಾಲಿ ಇರುವ ಇತರೆ ಹುದ್ದೆಗಳನ್ನೂ ಶೀಘ್ರದಲ್ಲೇ ಸರ್ಕಾರ ಭರ್ತಿ ಮಾಡಲಿದೆ ಎಂದರು.

ತಹಶೀಲ್ದಾರ್ ಕಚೇರಿ, ಸರ್ವೆ ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿಗಳ ದಾಖಲೆ ಕೊಠಡಿಗಳಲ್ಲಿ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ‘ಭೂ ಸುರಕ್ಷಾ’ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಲ್ಲಿ ಒಂದೊಂದು ತಾಲೂಕಿನಲ್ಲಿ ಆರಂಭಿಸಲಾಗುವುದು. ಡಿಜಿಟಲೀಕರಣದಿಂದ ದಾಖಲೆಗಳ ಕಳ್ಳತನ, ನಾಪತ್ತೆ ಅಥವಾ ದುರ್ಬಳಕೆ ಆಗುವುದನ್ನು ತಡೆಯಬಹುದು. ಜನರು ಕಚೇರಿಗಳಿಗೆ ಬರುವುದಕ್ಕಿಂತ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಬಹುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com