
ಬೆಳಗಾವಿ: ಮಗ ಯುವತಿಯೊಂದಿಗೆ ಓಡಿ ಹೋದ ಎಂಬ ಕಾರಣಕ್ಕೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಸದ್ಯ ಈಗ ಈ ಘಟನೆಗೆ ಕಾರಣವಾಗಿದ್ದ ವಂಟಮೂರಿ ಗ್ರಾಮದ ಪ್ರೇಮಿಗಳ ಮದುವೆ ಮಾಡಿಸಲಾಗಿದೆ. ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ಮದುವೆ ಮಾಡಿಸಲಾಗಿದೆ.
ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಯುವಕ ಮತ್ತು ಯುವತಿ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಹುಡುಗಿಯ ಮನೆಯವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ, ಹುಡುಗಿಯ ಕುಟುಂಬವು ಡಿಸೆಂಬರ್ 12, 2023 ರಂದು ಆಕೆಗೆ ಬೇರೋಬ್ಬನ ಜೊತೆ ನಿಶ್ಚಿತಾರ್ಥ ನಿಗದಿ ಮಾಡಿತ್ತು.
ಇದನ್ನು ತಿಳಿದ ನಂತರ ಪ್ರೀತಿಸುತ್ತಿದ್ದ ಹುಡುಗ ಹಿಂದಿನ ರಾತ್ರಿ ಆಕೆಯೊಂದಿಗೆ ಓಡಿಹೋಗಿದ್ದನು. ಇದರಿಂದ ಕುಪಿತಗೊಂಡ ಯುವತಿಯ ಪೋಷಕರು ಯುವಕನ ಮನೆಗೆ ತೆರಳಿ ಧ್ವಂಸ ಮಾಡಿದ್ದರು. ಅತನ ಬಬೆಂಬಲಿಗರು ಬಾಲಕನ ತಾಯಿಗೆ ಥಳಿಸಿ, ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ವಿಕೃತಿ ಮರೆದಿದ್ದರು.
ಈ ಘಟನೆ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಕರ್ನಾಟಕ ಹೈಕೋರ್ಟ್ ಈ ಘಟನೆಯನ್ನು ತೀಕ್ಷ್ಣವಾಗಿ ಖಂಡಿಸಿತು ಮತ್ತು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು. ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಪೊಲೀಸರು ಮತ್ತು ಸಿಐಡಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
ಘಟನೆ ನಡೆದ ಕಾಕತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅವರ ನಿರ್ಲಕ್ಷ್ಯಕ್ಕಾಗಿ ಅಮಾನತುಗೊಳಿಸಲಾಗಿದೆ. ನಂತರ ಪರಾರಿಯಾಗಿದ್ದ ಜೋಡಿಯನ್ನು ಪತ್ತೆ ಹಚ್ಚಿದ ಪೊಲೀಸರು ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಆರೈಕೆ ಮಾಡಿದ್ದಾರೆ.
Advertisement