ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್) ಟ್ವಿಟರ್ ಖಾತೆ ನಿರ್ವಾಹಕ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಇಸಿಸ್ ನಿಷೇಧಿತ ಭಯೋತ್ಪಾದಕ ಸಂಘಟನೆಯ ಅಬೂಬಕ್ಕರ್ ಬಾಗ್ದಾದಿ ಎಂಬಾತನ ನೇತೃತ್ವದಲ್ಲಿ ಸಿರಿಯಾ ದೇಶದಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿದ್ದವು. ಇದೇ ವೇಳೆ ಪಶ್ಚಿಮ ಬಂಗಾಳ ಮೂಲದ ಮೆಹದಿ, ಜಾಲಹಳ್ಳಿಯ ಸಿದ್ಧಾರ್ಥನಗರದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ. ಇಲ್ಲಿಂದಲೇ 2012ರಲ್ಲಿ ಐಸಿಸ್ ಪರವಾಗಿ ‘ಶಮ್ಮಿವಿಟ್ನೆಸ್ ಟ್ವಿಟರ್’ ಅಕೌಂಟ್ ತೆರೆದು ಉಗ್ರರು ನಡೆಸುತ್ತಿದ್ದ ರಕ್ತಪಾತ, ಉಗ್ರವಾದವನ್ನು ಟ್ವೀಟ್ ಮಾಡುವ ಮೂಲಕ ಇಸಿಸ್ ಸಂಘಟನೆಗೆ ಸೇರುವಂತೆ ಪ್ರಚೋದನೆ ನೀಡುತ್ತಿದ್ದ.
ಈ ಬಗ್ಗೆ ಇಂಗ್ಲೆಡ್ ಮಿಡಿಯಾ ಸುದ್ದಿ ಪ್ರಸಾರ ಮಾಡಿತ್ತು. ಇದರ ಮೇರೆಗೆ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು, 2014 ಡಿ.13ರಂದು ಜಾಲಹಳ್ಳಿ ಸಿದ್ಧಾರ್ಥನಗರದಲ್ಲಿ ಮೆಹ್ದಿಯನ್ನು ಬಂಧಿಸಿದ್ದರು.
ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಎಸಿಪಿ ಎಂ.ಕೆ. ತಮ್ಮಯ್ಯ, ತನಿಖೆ ನಡೆಸಿತ್ತು. ಕೃತ್ಯಕ್ಕೆ ಬಳಸಿದ್ದ ಲ್ಯಾಪ್‌ಟಾಪ್, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಅಮೆರಿಕಾದ ಟ್ವಿಟರ್ ಸಂಸ್ಥೆಯಿಂದ ದಾಖಲೆ ಸಂಗ್ರಹಿಸಿ ಕೋರ್ಟ್‌ಗೆ 37 ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಬಿಕ್ಕಣ್ಣನವರ್, ಪೊಲೀಸರ ಪರವಾಗಿ ವಾದ ಮಂಡಿಸಿದ್ದರು. ಅಲ್ಲದೆ, ಭಯೋತ್ಪಾದಕ ನಿಗ್ರಹ ದಳ(ಎಟಿಸಿ) ಎಸಿಪಿ ಬಿ.ಆರ್. ವೇಣುಗೋಪಾಲ್ ಅವರ ತಂಡ, ನ್ಯಾಯಾಲಯದಲ್ಲಿ ಪ್ರಕರಣದ ಮೇಲ್ವಿಚಾರಣೆ ವಹಿಸಿತ್ತು. ಸುದೀರ್ಘ ವಾದ-ಪ್ರತಿವಾದ ಆಲಿಸಿದ ಎನ್‌ಐಎ ವಿಶೇಷ ನ್ಯಾಯಾಲಯ, ಅಪರಾಧಿ ಮೆಹದಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 2.15 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಉಗ್ರ ಮೆಹದಿ ಮೆಸ್ರೂಸ್ ಬಿಸ್ವಾಸ್, ಬಂಧನಕ್ಕೆ ಒಳಗಾದ ದಿನದಿಂದ ಪರಪ್ಪನ ಅಗ್ರಹಾರದಲ್ಲಿಯೇ ಸೆರೆಯಾಗಿದ್ದಾನೆ. ಇದೀಗ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದ್ದು, 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೆ 9 ವರ್ಷ 1 ತಿಂಗಳು ಜೈಲು ವಾಸ ಅನುಭವಿಸಿದ್ದಾನೆ. ಉಳಿದ 11 ತಿಂಗಳು ಬಾಕಿ ಇರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement