ಬೆಳಗಾವಿ: ಎಂಕೆ ಹುಬ್ಬಳ್ಳಿಯಲ್ಲಿ ಭಗವಾಧ್ವಜ ತೆರವಿಗೆ ಆಕ್ರೋಶ; ಪರಿಸ್ಥಿತಿ ಉದ್ವಿಗ್ನ, ಪೊಲೀಸರ ನಿಯೋಜನೆ

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಪೊಲೀಸರು ಭಗವಾಧ್ವಜ ತೆರವು ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು ತೆರವು ಮಾಡಿರುವ ಭಗವಾಧ್ವಜ ಮರುಸ್ಥಾಪನೆಗೆ ಪಟ್ಟು ಹಿಡಿದ್ದಾರೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ.
ಬೆಳಗಾವಿ ಪೊಲೀಸರು
ಬೆಳಗಾವಿ ಪೊಲೀಸರು
Updated on

ಬೆಳಗಾವಿ: ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಪೊಲೀಸರು ಭಗವಾಧ್ವಜ ತೆರವು ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು ತೆರವು ಮಾಡಿರುವ ಭಗವಾಧ್ವಜ ಮರುಸ್ಥಾಪನೆಗೆ ಪಟ್ಟು ಹಿಡಿದ್ದಾರೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. 

ಭಗವಾಧ್ವಜ ಮರುಸ್ಥಾಪನೆ ಹಿನ್ನೆಲೆ ಸ್ಥಳೀಯ ಹಿಂದೂ ಕಾರ್ಯಕರ್ತರು ಆಯೋಜಿಸಿದ್ದ 'ಚಲೋ ಭಗವ ಅಭಿಯಾನ' ರ್ಯಾಲಿಯನ್ನು ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಬೆಳಗಾವಿ ಜಿಲ್ಲಾ ಪೊಲೀಸರು ತಡೆದಿದ್ದರು. ಈ ವೇಳೆ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟಿ ಅವರೊಂದಿಗೆ ಚರ್ಚಿಸಿದರು. ಇನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವಂತೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ಸಾರ್ವಜನಿಕರು ಶಾಂತಿ ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಳೆದ ವಾರ ಪಟ್ಟಣದ ಗಾಂಧಿನಗರದ ಮಸೀದಿಯೊಂದರ ವಿದ್ಯುತ್ ತಂತಿ ತುಂಡಾಗಿ ಟಿಪ್ಪು ಸುಲ್ತಾನ್ ಭಾವಚಿತ್ರವಿದ್ದ ಧ್ವಜ ಉರುಳಿ ಬಿದ್ದಿತ್ತು. ತಡರಾತ್ರಿ ನಡೆದ ಈ ಘಟನೆಯಿಂದ ಮರುದಿನ ಕೆಲಕಾಲ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದೊಂದು ಕಿಡಿಗೇಡಿತನದ ಕೃತ್ಯವಾಗಿರಬಹುದೆಂದು ಶಂಕಿಸಿದ ಪೊಲೀಸರು ಯಾವುದೇ ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಹಿಂದೂ ಹಾಗೂ ಮುಸ್ಲಿಂ ಮುಖಂಡರನ್ನು ಕರೆಸಿ ಸಮಾಧಾನಪಡಿಸಿದರು.

ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪಟ್ಟಣದಲ್ಲಿದ್ದ ಕೇಸರಿ ಹಾಗೂ ಇಸ್ಲಾಮಿಕ್ ಧ್ವಜಗಳನ್ನು ತೆಗೆದಿದ್ದರು. ಈ ವೇಳೆ ಪಟ್ಟಣದ ಸಾಂಬಣ್ಣನವರ ಓಣಿಯ ಹಳೆ ಹನುಮಾನ ದೇವಸ್ಥಾನ ಮಂದಿರದ ಬಳಿಯಿದ್ದ ಕೇಸರಿ ಧ್ವಜವನ್ನು ತೆರವುಗೊಳಿಸಲಾಗಿತ್ತು. ಇದು ಸ್ಥಳೀಯ ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಕಾರಣವಾಗಿತ್ತು. ಭಾನುವಾರ ಹನುಮಾನ್ ಮಂದಿರದ ಬಳಿ ಮತ್ತೆ ಭಗವಾಧ್ವಜ ಧ್ವಜಾರೋಹಣಕ್ಕೆ ಸಿದ್ಧತೆ ನಡೆಸಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದರು. ಭಗವಾಧ್ವಜ ಧ್ವಜಾರೋಹಣಕ್ಕೆ ಪೊಲೀಸರು ಅಡ್ಡಿಪಡಿಸಿದ್ದರಿಂದ ಅಸಮಾಧಾನಗೊಂಡ ಹಿಂದೂ ಕಾರ್ಯಕರ್ತರು, ಧ್ವಜಾರೋಹಣಕ್ಕೆ ಅವಕಾಶ ನೀಡುವಂತೆ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಮಾತನಾಡಿ, ಭಗವಾಧ್ವಜ ಮರುಸ್ಥಾಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅವರ ಭಾವನೆಗಳನ್ನು ಗೌರವಿಸುತ್ತೇವೆ. ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಸರಕಾರ ಕೈಗೊಂಡಿರುವ ಆದೇಶವನ್ನು ಪಾಲಿಸುತ್ತೇವೆ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com