ಕೆಐಎ ಟರ್ಮಿನಲ್ 2ನಲ್ಲಿ ರಾಮನ ಸ್ಮರಣೆ ಗೀತೆ, ನೃತ್ಯ: ಚರ್ಚೆ ಹುಟ್ಟುಹಾಕಿದ ವಿಡಿಯೋ!

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಕೆಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಾಮನ ಕುರಿತು ಹಾಡು ಹಾಗೂ ನೃತ್ಯ ಮಾಡಿದ್ದು, ಈ ಕುರಿತ ವೀಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ.
ವಿಮಾನ ನಿಲ್ದಾಣದಲ್ಲಿ ಹಾಡು ಹೇಳುತ್ತಿರುವ ಮಹಿಳೆಯರು.
ವಿಮಾನ ನಿಲ್ದಾಣದಲ್ಲಿ ಹಾಡು ಹೇಳುತ್ತಿರುವ ಮಹಿಳೆಯರು.

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಕೆಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಾಮನ ಕುರಿತು ಹಾಡು ಹಾಗೂ ನೃತ್ಯ ಮಾಡಿದ್ದು, ಈ ಕುರಿತ ವೀಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ.

ಮೈಸೂರು ಮೂಲದ ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್‌ನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶ್ರೀರಾಮನ ಕುರಿತು ಟರ್ಮಿನಲ್-2 ನಲ್ಲಿ ಹಾಡೊಂದನ್ನು ಒಗ್ಗೂಡಿ ಹಾಡಿದ್ದು, ಈ ಕುರಿತ 1.50 ನಿಮಿಷಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಏರ್ ಮಾರ್ಷಸ್ ಅನಿಲ್ ಚೋಪ್ರಾಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ವಿಮಾನ ನಿಲ್ದಾಣದೊಳಗೆ ನಿಂತಿರುವ, ಕುಳಿತಿರುವ ಸುಮಾರು 50 ಮಂದಿ ಮಹಿಳೆಯರು, ಕೆಲ ಪುರುಷರು ಹಾಡು ಹೇಳುತ್ತಿರುವುದು ಕಂಡು ಬಂದಿದೆ. ಇವರೆಲ್ಲರೂ ಅಯೋಧ್ಯೆಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್‌ ವಿದ್ಯಾರ್ಥಿ ನೃತ್ಯ ಮಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ಈ ಎರಡೂ ವಿಡಿಯೋಗಳು ಇದೀಗ ಚರ್ಚೆಗಳಿಗೆ ಕಾರಣವಾಗಿದೆ.

ಮಹಿಳೆಯರು ಹಾಡು ಹಾಡಿರುವ ವಿಡಿಯೋವನ್ನು ಮಾಜಿ ಶಾಸಕ ಸಿಟಿ ರವಿಯವರೂ ಕೂಡ ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸನಾತನ ಧರ್ಮ ಮತ್ತು ಅದರ ವೈಭವದ ಸಂಸ್ಕೃತಿಯನ್ನು ಹೆಮ್ಮೆಯೊಂದಿಗೆ ಪ್ರಸ್ತುತ ಪಡಿಸಿದ ನಮ್ಮ ನಾರಿ ಶಕ್ತಿಗೆ ಸೆಲ್ಯೂಟ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಕೆಲವರು ಜೈ ಶ್ರೀರಾಮ್, ರಾಮ ರಾಜ್ಯ ಬಂದಿದೆ ಎಂದು ಕಮೆಂಟ್ ಮಾಡಿದ್ದಾರೆ.

ಕೆಲವರು ವಿರೋಧ ವ್ಯಕ್ತಪಡಿಸಿರುವುದೂ ಕೂಡ ಕಂಡು ಬಂದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಸೈಲೆಂಟ್ ಏರ್ಪೋಟ್ ಆಗಿದೆ. ಇಲ್ಲಿನ ಪ್ರಯಾಣಿಕರಿಗೆ ಶಬ್ದ-ಮುಕ್ತ ಹಾಗೂ ಶಾಂತಿಯುತ ಪ್ರಯಾಣದ ಅನುಭವವನ್ನು ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.

ರೋಹಿತ್ ಜೈನ್ ಎಂಬುವವರು ಪೋಸ್ಟ್ ಮಾಡಿ, ಒಳ್ಳೆಯದೇ. ಆದರೆ, ಮುಂದೆ ಅಲ್ಪಸಂಖ್ಯಾತರೂ ಕೂಡ ಈ ರೀತಿ ಮಾಡಬೇಡಿ. ಅವರೂ ಕೂಡ ತಮ್ಮ ಸಂಸ್ಕೃತಿಯನ್ನು ತೋರಿಸಬಹುದು ಎಂದು ಹೇಳಿದ್ದಾರೆ.

ಜೆಮಿನಿ ಎಂಬುವವರು ಪೋಸ್ಟ್ ಮಾಡಿ, ವಿಮಾನ ನಿಲ್ದಾಣದಲ್ಲಿ ಶಬ್ದ ಮಾಡಬಾರದು. ಶಬ್ದ ಮಾಡುವುದು ಹೆಮ್ಮೆ ವಿಚಾರವಲ್ಲ. ಧರ್ಮದ ಹೊರತಾಯಿಗೂ ಹೆಮ್ಮೆ ಪಡುವ ಸಾಕಷ್ಟು ವಿಷಯಗಳಿವೆ ಎಂದಿದ್ದಾರೆ.

ಇನ್ನೂ ಕೆಲವರು ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಮಾಡಿದವರ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಸುನಿಲ್ ಮೆನನ್ ಎಂಬುವವರು ಪೋಸ್ಟ್ ಮಾಡಿ, ವಿಮಾನ ನಿಲ್ದಾಣದಲ್ಲಿ ಇಂತಹ ಬೆಳವಣಿಗೆಗಳಿಗೆ ಅನುಮತಿ ನೀಡಿದರೆ, ಎಲ್ಲಾ ಧರ್ಮಗಳು ಈ ರೀತಿ ಮಾಡಲು ಆರಂಭಿಸುತ್ತವೆ. ದೇಶೀಯ ಹಾಗೂ ಅಂತರಾಷ್ಟ್ರೀಯ ಪ್ರಯಾಮಿಕರು ನಮ್ಮ ಕಿವಿಗಳು ಕಿತ್ತಹೋಗುವಂತ ಮಾಡುತ್ತಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com