ಕಾನೂನು ಅನ್ವಯ ಅನುಮತಿ ಸಿಗದ ಹೊರತು ಕಾರ್ಖಾನೆ ನಡೆಸುವಂತಿಲ್ಲ: ಯತ್ನಾಳ್ ಕುಟುಂಬಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು: ಕಾನೂನು ಅನ್ವಯ ಅನುಮತಿ ಸಿಗದ ಹೊರತು ಕಾರ್ಖಾನೆ ನಡೆಸುವಂತಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಂಬಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಯತ್ನಾಳ್ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕರಾಗಿರುವ ರಮಣಗೌಡ ಬಿ ಪಾಟೀಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ವೆಂಕಟೇಶ್ ದಳವಾಯಿ ಅವರು ರಾಜಕೀಯ ಕಾರಣಕ್ಕಾಗಿ ಘಟಕ ಮುಚ್ಚಲು ಒತ್ತಾಯಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಆಗ ಪೀಠವು “2021ರಲ್ಲಿ ಕಾರ್ಖಾನೆ ಖರೀದಿಸಿದ್ದೀರಿ. ನಾವೀಗ 2024ರಲ್ಲಿದ್ದೇವೆ. ಈ ಅವಧಿಯಲ್ಲಿ ನೀವು ಅಗತ್ಯ ಅನುಮತಿ ಪಡೆಯಬೇಕಿತ್ತು. ಕಾನೂನಿನ ಪ್ರಕಾರ ನೀವು ಅನುಮತಿ ಪಡೆಯುವವರೆಗೆ ಕಾರ್ಖಾನೆ ನಡೆಸಲಾಗದು” ಎಂದು ಹೇಳಿತು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಕಾರ್ಖಾನೆ ನಡೆಸುವುದಿಲ್ಲ ಎಂಬ ಮುಚ್ಚಳಿಕೆಯನ್ನು ದಾಖಲಿಸಿಕೊಳ್ಳಬಹುದೇ? ಹಾಗಾದಲ್ಲಿ ಸರ್ಕಾರ ನಿಮ್ಮ ಮನವಿ ಪರಿಗಣಿಸಲಿದೆ. ನಿಮ್ಮ ಮುಚ್ಚಳಿಕೆ ಪರಿಗಣಿಸಿ, ಆದೇಶ ಮಾಡುವಂತೆ ಸರ್ಕಾರಕ್ಕೆ ಆದೇಶಿಸುತ್ತೇವೆ. 2021ರಲ್ಲಿ ಕಾರ್ಖಾನೆ ಖರೀದಿಸಿದ್ದು, ಸರ್ಕಾರ ನಿಮ್ಮ ಮನವಿ ಪರಿಗಣಿಸಲಿಲ್ಲ ಎಂದಿದ್ದರೆ ಒಪ್ಪಬಹುದಿತ್ತು. ಈ ವಿಚಾರದಲ್ಲಿ ನೀವು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು” ಎಂದಿತು.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಕಾರ್ಖಾನೆಯನ್ನು ನಿಯಮದ ಪ್ರಕಾರವಾಗಿ ನಡೆಸಲಾಗುತ್ತಿಲ್ಲ. ಹೀಗಾಗಿ, ಕ್ರಮಕೈಗೊಳ್ಳಲಾಗಿದೆಯಷ್ಟೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ” ಎಂದು ಪೀಠಕ್ಕೆ ವಿವರಿಸಿದರು.
ಆಗ ಪೀಠವು ಕಾರ್ಖಾನೆ ಮುಚ್ಚುವ ಸಂಬಂಧ ಅರ್ಜಿದಾರರಿಂದ ಸೂಚನೆ ಪಡೆದು ಗುರುವಾರ ತಿಳಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಿತು.
ಸಿದ್ಧಸಿರಿ ಸಕ್ಕರೆ, ಎಥೆನಾಲ್ ಮತ್ತು ಪವರ್ ಘಟಕ ಮುಚ್ಚುವಂತೆ ಕಲಬುರ್ಗಿ ವಲಯದ ಹಿರಿಯ ಪರಿಸರ ಅಧಿಕಾರಿ ಜನವರಿ 18ರಂದು ನೋಟಿಸ್ ಜಾರಿ ಮಾಡಿದ್ದರು. ಆನಂತರ ಕೆಎಸ್‌ಪಿಸಿಬಿ ಅಧ್ಯಕ್ಷರು ಜನವರಿ 25ರಂದು ಆದೇಶ ಮಾಡಿದ್ದರು. ಈ ಎರಡೂ ಆದೇಶವನ್ನು ವಜಾ ಮಾಡಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ. ಮಧ್ಯಂತರ ಪರಿಹಾರದ ಭಾಗವಾಗಿ ಕೆಎಸ್‌ಪಿಸಿಬಿ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ