ಬೆಂಗಳೂರಿನ ಕುಂಬಾರಪೇಟೆ ಅಂಗಡಿಯಲ್ಲಿ ಡಬಲ್ ಮರ್ಡರ್: ಆರೋಪಿ ಪೊಲೀಸರಿಗೆ ಶರಣು

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರಿನ ಕುಂಬಾರಪೇಟೆ ಮುಖ್ಯರಸ್ತೆಯ ಅಂಗಡಿಯೊಂದರಲ್ಲಿ ಬುಧವಾರ ಸಂಜೆ ಜೋಡಿ ಕೊಲೆ ನಡೆದಿದೆ. ಡಬಲ್ ಮರ್ಡರ್ ಮಾಡಿದ ನಂತರ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರಿನ ಕುಂಬಾರಪೇಟೆ ಮುಖ್ಯರಸ್ತೆಯ ಅಂಗಡಿಯೊಂದರಲ್ಲಿ ಬುಧವಾರ ಸಂಜೆ ಜೋಡಿ ಕೊಲೆ ನಡೆದಿದೆ. ಡಬಲ್ ಮರ್ಡರ್ ಮಾಡಿದ ನಂತರ ಆರೋಪಿ ಪೊಲೀಸರ ಮುಂದೆ ಶರಣಾಗಿದ್ದಾರೆ.

ಕೊಲೆಯಾದವರನ್ನು ಪದ್ಮನಾಭನಗರ ನಿವಾಸಿ ಸುರೇಶ್(55) ಮತ್ತು ಚಾಮರಾಜಪೇಟೆಯ ಮಹೇಂದ್ರ(68) ಎಂದು ಗುರುತಿಸಲಾಗಿದೆ. ಸುರೇಶ್ ಕುಂಬಾರಪೇಟೆ ಮುಖ್ಯರಸ್ತೆಯ ಮಾರುತಿ ಕಾಂಪ್ಲೆಕ್ಸ್‌ನಲ್ಲಿ ಅಡುಗೆ ಸಾಮಾನುಗಳ ಅಂಗಡಿ ನಡೆಸುತ್ತಿದ್ದರೆ, ಮಹೇಂದ್ರ ಅದೇ ಪ್ರದೇಶದಲ್ಲಿ ಹಾರ್ಡ್‌ವೇರ್ ಅಂಗಡಿ ನಡೆಸುತ್ತಿದ್ದರು.

ಇನ್ನು ಆರೋಪಿಯನ್ನು ಮಡಿವಾಳ ನಿವಾಸಿ ಭದ್ರ ಪ್ರಸಾದ್ ಎಂದು ಗುರುತಿಸಲಾಗಿದ್ದು, ಈತ ಸುರೇಶ್ ಅವರ ದೂರದ ಸಂಬಂಧಿ. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಎಲೆಕ್ಟ್ರಿಕ್‌ ಉಪಕರಣಗಳ ಅಂಗಡಿ ನಡೆಸುತ್ತಿದ್ದಾರೆ.

ಸುರೇಶ್ ಮತ್ತು ಮಹೇಂದ್ರ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಪ್ರತಿ ದಿನ ಸಂಜೆ ಅವರ ಅಂಗಡಿಗೆ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಬುಧವಾರ ರಾತ್ರಿ 8 ಗಂಟೆಗೆ ಭದ್ರ ಪ್ರಸಾದ್ ಅವರು ಸುರೇಶ್ ಅವರೊಂದಿಗೆ ಆಸ್ತಿ ವಿವಾದದ ಬಗ್ಗೆ ಚರ್ಚಿಸುವ ನೆಪದಲ್ಲಿ ಅಂಗಡಿಗೆ ಬಂದಿದ್ದು, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಭದ್ರ ಪ್ರಸಾದ್ ಅವರು ಚಾಕು ತೆಗೆದುಕೊಂಡು ಕುರ್ಚಿಯ ಮೇಲೆ ಕುಳಿತಿದ್ದ ಸುರೇಶ್‌ಗೆ ಹಲವು ಬಾರಿ ಇರಿದಿದ್ದಾನೆ. ತನ್ನ ಸ್ನೇಹಿತನನ್ನು ರಕ್ಷಿಸಲು ಯತ್ನಿಸಿದ ಮಹೇಂದ್ರನ ಮೇಲೂ ದಾಳಿಕೋರ ಚಾಕುವಿನಿಂದ ಇರಿದಿದ್ದಾರೆ. ಮಹೇಂದ್ರ ಅಂಗಡಿಯಿಂದ ಹೊರಗೆ ಓಡಿ ತನ್ನ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದನಾದರೂ, ಭದ್ರ ಪ್ರಸಾದ್ ಆತನನ್ನು ಹಿಂಬಾಲಿಸಿ ಚಾಕುವಿನಿಂದ ಇರಿದು ಕೊಂದು ಸ್ಥಳದಿಂದ ಓಡಿಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಸುರೇಶ್ ಅವರ ಕುಟುಂಬದ ಪ್ರಕಾರ, ಆಸ್ತಿ ವಿವಾದಕ್ಕೆ ಈ ಕೊಲೆಯಾಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಡಿಸಿಪಿ(ಕೇಂದ್ರ ವಿಭಾಗ) ಶೇಖರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸಂಬಂಧ ಹಲಸೂರು ಗೇಟ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com