ಸಿಎಂ ಜನಸ್ಪಂದನಕ್ಕೆ ಉತ್ತಮ ಪ್ರತಿಕ್ರಿಯೆ: 10 ಸಾವಿರಕ್ಕೂ ಹೆಚ್ಚು ಅಹವಾಲು, ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಗಡುವು

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕಚೇರಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮ 2.0 ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 20,000 ಮಂದಿ ಆಗಮಿಸಿದ್ದು, 11,000 ಕ್ಕೂ ಹೆಚ್ಚಿನ ಅರ್ಜಿಗಳು ಬಂದಿದೆ.
ಸಿಎಂ ಜನಸ್ಪಂದನ
ಸಿಎಂ ಜನಸ್ಪಂದನ

ಬೆಂಗಳೂರು: ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕಚೇರಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮ 2.0 ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 20,000 ಮಂದಿ ಆಗಮಿಸಿದ್ದು, 11,000 ಕ್ಕೂ ಹೆಚ್ಚಿನ ಅರ್ಜಿಗಳು ಬಂದಿದೆ

ಕಳೆದ ವರ್ಷ ನವೆಂಬರ್ ನಲ್ಲಿ ಸಿಎಂ ಗೃಹ ಕಚೇರಿಯಲ್ಲಿ ಇಂಥಹದ್ದೇ ಕಾರ್ಯಕ್ರಮ ನಡೆದಿತ್ತು. ವಿಧಾನಸೌಧದ ಮುಂಭಾಗದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಬೃಹತ್ ಜನಸ್ಪಂದನ ಕಾರ್ಯಕ್ರಮ ನಡೆದಿದೆ ಎಂದು ಸಿಎಂ ಹೇಳಿದ್ದಾರೆ. 

ಜನರ ಅಹವಾಲು ಪಡೆಯುವುದಕ್ಕೆ ಇಲಾಖಾವಾರು ಸ್ಟಾಲ್ ಗಳನ್ನು ನಿರ್ಮಿಸಲಾಗಿತ್ತು. ಒಂದು ತಿಂಗಳ ಒಳಗಾಗಿ ಅಹವಾಲುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಮೊದಲ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ್ದ ಶೇ.98 ರಷ್ಟು ಅರ್ಜಿಗಳಿಗೆ ಈವರೆಗೂ ಪರಿಹಾರ ನೀಡಲಾಗಿದೆ. ಅದೇ ಮಾದರಿಯಲ್ಲಿ ಈ ಬಾರಿಯೂ ಅಹವಾಲುಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸೂಚನೆ ನೀಡಿರುವುದಾಗಿ ಸಿಎಂ ಹೇಳಿದ್ದಾರೆ.

ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿಯೇ ಬಗೆಹರಿಸಿದರೆ, ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಬೆಂಗಳೂರಿನತ್ತ ಧಾವಿಸುವುದು ತಪ್ಪಲಿದೆ. ಈ ಜವಾಬ್ದಾರಿ ಜಿಲ್ಲಾಧಿಕಾರಿಗಳು, ಸಿಇಒ, ಎಸ್ ಪಿಗಳ ಮೇಲಿದೆ ಎಂದು ಸಿಎಂ ಹೇಳಿದ್ದಾರೆ. 

ವಿಶೇಷವಾಗಿ ವಿಕಲಚೇತನರು, ಆರೋಗ್ಯ ಸಮಸ್ಯೆ ಇರುವವರು, ವೃದ್ಧರು ಮತ್ತು ಮಹಿಳೆಯರ ಕುಂದುಕೊರತೆಗಳಿರುವ ಜನರನ್ನು ಮುಖ್ಯಮಂತ್ರಿಗಳು ಖುದ್ದಾಗಿ ಭೇಟಿಯಾದರು. ಅವರಿಂದ ಅರ್ಜಿಗಳನ್ನು ಸ್ವೀಕರಿಸಿದ ಅವರು, ಆದಷ್ಟು ಬೇಗ ಸೂಕ್ತ ಸ್ಪಂದನೆ ನೀಡುವುದಾಗಿ ಭರವಸೆ ನೀಡಿ, ಆದ್ಯತೆ ಮೇರೆಗೆ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಿಎಂ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ವಿಧಾನಸೌಧದ ಬಳಿಗೆ ಹಿಂದಿನ ದಿನದ ರಾತ್ರಿಯಿಂದಲೇ ಜನರು ಧಾವಿಸಿದ್ದರು.

ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬೆಳಗ್ಗೆ 8.30ಕ್ಕೆ ಅರ್ಜಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ನಿರೀಕ್ಷೆಗೂ ಮೀರಿ ಜನರು ಕಂದಾಯ ಇಲಾಖೆ ಕೌಂಟರ್‌ಗೆ ಆಗಮಿಸುತ್ತಿರುವುದನ್ನು ಮನಗಂಡ ಸಂಘಟಕರು ಅರ್ಜಿದಾರರಿಗೆ ಕಂದಾಯ ಇಲಾಖೆಗೆ ಮತ್ತೊಂದು ಕೌಂಟರ್‌ ತೆರೆದು ಆಸನ ವ್ಯವಸ್ಥೆ ಕಲ್ಪಿಸಿದರು.

ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸುವುದನ್ನು ಗಮನದಲ್ಲಿಟ್ಟುಕೊಂಡು 8 ಎಸಿಪಿಗಳು, 23 ಇನ್ಸ್‌ಪೆಕ್ಟರ್‌ಗಳು, 58 ಸಬ್‌ಇನ್ಸ್‌ಪೆಕ್ಟರ್‌ಗಳು, 205 ಪೊಲೀಸ್ ಕಾನ್ಸ್‌ಟೇಬಲ್‌ಗಳು, 142 ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳು, 500 ಗೃಹ ರಕ್ಷಕರು ಸೇರಿದಂತೆ ಒಟ್ಟು 936 ಪೊಲೀಸ್ ಸಿಬ್ಬಂದಿಗಳನ್ನು  ನಿಯೋಜಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com