ಅಮಿತ್ ಶಾ ಅವರೇ, ಕರ್ನಾಟಕಕ್ಕೆ ಕಾಲಿಡುವ ಮೊದಲು ಈ ಪ್ರಶ್ನೆಗೆ ಉತ್ತರಿಸಿರುವಿರಾ? ಸಿಎಂ ಸಿದ್ದರಾಮಯ್ಯ 

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮೈಸೂರಿಗೆ ಭೇಟಿ ನೀಡುತ್ತಿದ್ದು, ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಗಳ ಸರಮಾಲೆಯನ್ನೆ ಮುಂದಿಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ, ಅಮಿತ್ ಶಾ
ಸಿಎಂ ಸಿದ್ದರಾಮಯ್ಯ, ಅಮಿತ್ ಶಾ
Updated on

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮೈಸೂರಿಗೆ ಭೇಟಿ ನೀಡುತ್ತಿದ್ದು, ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಗಳ ಸರಮಾಲೆಯನ್ನೆ ಮುಂದಿಟ್ಟಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪ್ರಶ್ನೆ ಕೇಳಿರುವ ಮುಖ್ಯಮಂತ್ರಿ, ಬರಪರಿಹಾರಕ್ಕೆ ಮನವಿ ಸಲ್ಲಿಸಿ ನಾಲ್ಕು ತಿಂಗಳುಗಳಾಗಿವೆ. ಕೇಂದ್ರ ತಜ್ಞರ ಸಮಿತಿ ಬಂದು ಅಧ್ಯಯನ ಮಾಡಿ ವರದಿ ಸಲ್ಲಿಸಿಯಾಗಿದೆ. ನಿಯಮಗಳ ಪ್ರಕಾರ ಕೇಂದ್ರ ಗೃಹಸಚಿವರು ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಸಭೆ ನಡೆಸಿ ತಜ್ಞರ ವರದಿಯನ್ನು ಪರಿಶೀಲಿಸಿ ಪರಿಹಾರಕ್ಕೆ ಅನುಮೋದನೆ ನೀಡಬೇಕು. ಇಂತಹದ್ದೊಂದು ಸಣ್ಣ ಸಭೆ ನಡೆಸಲು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪುರುಸೊತ್ತಿಲ್ಲ. ಯಾವಾಗ ಬರ ಪರಿಹಾರ ನೀಡುತ್ತೀರಿ? ಅಮಿತ್ ಶಹಾ ಅವರೇ, ಕರ್ನಾಟಕಕ್ಕೆ ಕಾಲಿಡುವ ಮೊದಲು ಈ ಪ್ರಶ್ನೆಗೆ ಉತ್ತರಿಸಿರುವಿರಾ? ಎಂದಿದ್ದಾರೆ. 

ಹುಬ್ಬಳ್ಳಿ -ಧಾರವಾಡ ಸುತ್ತಮುತ್ತಲಿನ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹದಾಯಿಯ ಕಳಸಾ ನಾಲಾ ತಿರುವು ಯೋಜನೆಗೆ ಮತ್ತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮೋದನೆ ನಿರಾಕರಿಸಿದೆ. ಕೇಂದ್ರ ಅರಣ್ಣ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಮಹಾದಾಯಿ ಯೋಜನೆಗೆ ಅನುಮೋದನೆ ನೀಡದಿರಲು ನಿರ್ಧರಿಸಿದೆ. ಈ ಸಂದೇಶವನ್ನು ಕನ್ನಡಿಗರಿಗೆ ತಿಳಿಸಲು ಕರ್ನಾಟಕಕ್ಕೆ ಬರುತ್ತಿದ್ದೀರಾ ಎಂದು ಅಮಿತ್ ಶಾ ಅವರನ್ನು ಕೇಳಿದ್ದಾರೆ. 

ಬಡ ಕನ್ನಡಿಗರ ಹಸಿವು ನೀಗಿಸಲೆಂದೇ ನಾವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಅಡ್ಡಗಾಲು ಹಾಕುತ್ತಲೇ ಬಂದಿರುವುದು ಇಡೀ ದೇಶಕ್ಕೆ ಗೊತ್ತಿದೆ. ಅನ್ನಭಾಗ್ಯ ಯೋಜನೆಯಡಿ ವಿತರಿಸಲು ಬೇಕಾಗಿರುವ ಅಕ್ಕಿಯನ್ನು  ಒಂದು ಕಿಲೋಗೆ 33 ರೂಪಾಯಿ ಕೊಟ್ಟು ಖರೀದಿಸುತ್ತೇವೆ ಎಂದು ಹೇಳಿದರೂ ಅಕ್ಕಿ ಕೊಡಲಿಲ್ಲ. ಈಗ ಅದೇ ಅಕ್ಕಿಯನ್ನು ‘’ಭಾರತ್ ಬ್ರಾಂಡ್’’ ಎಂಬ ಹೆಸರಿನಲ್ಲಿ  ಒಂದು ಕಿಲೋಗೆ ರೂ.29ರಂತೆ ಮಾರಾಟ ಮಾಡಲು ಹೊರಟಿದೆ. ಯಾಕೆ ಕನ್ನಡಿಗರ ಹಸಿವು ಹಸಿವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸುಮಾರು 2.5 ಲಕ್ಷ ಹೆಕ್ಟೇರ್ ಜಮೀನಿಗೆ ನೀರುಣಿಸುವ ಭದ್ರ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿ ವರ್ಷಗಳೇ ಕಳೆದಿವೆ. ಆದರೆ ಈ ವರೆಗೆ ಒಂದೇ ಒಂದು ಪೈಸೆ ಅನುದಾನ ನೀಡಿಲ್ಲ.  ಕೃಷ್ಣಾ ,ಕಾವೇರಿ, ಮಹದಾಯಿ, ಮೇಕೆದಾಟು  ಸೇರಿದಂತೆ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಇದೇ ರೀತಿಯ ನಿರ್ಲಕ್ಷ್ಯ ಯಾಕೆ? ಎಂದು ಕಿಡಿಕಾರಿದ್ದಾರೆ.

ತೆರಿಗೆ ಸಂಗ್ರಹಿಸಿ ದೇಶದ ಬೊಕ್ಕಸಕ್ಕೆ ತುಂಬುವುದರಲ್ಲಿ ಕರ್ನಾಟಕವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆದರೆ ಹದಿನೈದನೇ ಹಣಕಾಸು ಆಯೋಗ  ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇಕಡಾ 4.7ರಿಂದ ಶೇಕಡಾ 3.74ಕ್ಕೆ ಇಳಿಸಿದೆ. ಕನ್ನಡಿಗರ ಬೆವರಿನ ತೆರಿಗೆಯ ಮೇಲೆ ಯಾಕೆ ಕೇಂದ್ರ ಸರ್ಕಾರಕ್ಕೆ ಕೆಂಗಣ್ಣು? ಅತ್ತ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ, ಇತ್ತ ತಾರತಮ್ಯದಿಂದಾಗಿರುವ ನಷ್ಟ ತುಂಬುವ ವಿಶೇಷ ಅನುದಾನಕ್ಕೂ ಹಣಕಾಸು ಸಚಿವರಿಂದ ಕೊಕ್ಕೆ? ಇಂತಹ ಅನ್ಯಾಯ ಎಸಗಿ ಕರ್ನಾಟಕಕ್ಕೆ ಬಂದು ಕನ್ನಡಿಗರನ್ನು ಹೇಗೆ ಎದುರಿಸುತ್ತೀರಿ ಎಂದಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com