ವಯಸ್ಸು ಕೇವಲ ಸಂಖ್ಯೆ ಅಷ್ಟೇ: 89ನೇ ವಯಸ್ಸಿನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ವೃದ್ಧ!

ಇಳಿವಯಸ್ಸಿನಲ್ಲೂ ಪಿಎಚ್‌ಡಿ ಪೂರ್ಣಗೊಳಿಸುವ ಮೂಲಕ ವಯಸ್ಸು ಕೇವಲ ಸಂಖ್ಯೆ ಎಂಬುದಕ್ಕೆ ಈ ವೃದ್ಧ ವ್ಯಕ್ತಿ ಉದಾಹರಣೆಯಾಗಿದ್ದಾರೆ. ಧಾರವಾಡದ ಮಾರ್ಕಂಡೇಯ ದೊಡ್ಡಮನಿ ಅವರು ತಮ್ಮ 89ನೇ ವಯಸ್ಸಿನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.
ಮಾರ್ಕಂಡೇಯ ದೊಡ್ಡಮನಿ ಮತ್ತು ಅವರ ಪತ್ನಿ ಸುಶೀಲಾ
ಮಾರ್ಕಂಡೇಯ ದೊಡ್ಡಮನಿ ಮತ್ತು ಅವರ ಪತ್ನಿ ಸುಶೀಲಾ

ಧಾರವಾಡ: ಇಳಿವಯಸ್ಸಿನಲ್ಲೂ ಪಿಎಚ್‌ಡಿ ಪೂರ್ಣಗೊಳಿಸುವ ಮೂಲಕ ವಯಸ್ಸು ಕೇವಲ ಸಂಖ್ಯೆ ಎಂಬುದಕ್ಕೆ ಈ ವೃದ್ಧ ವ್ಯಕ್ತಿ ಉದಾಹರಣೆಯಾಗಿದ್ದಾರೆ. ಧಾರವಾಡದ ಮಾರ್ಕಂಡೇಯ ದೊಡ್ಡಮನಿ ಅವರು ತಮ್ಮ 89ನೇ ವಯಸ್ಸಿನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ.

ದೊಡಮನಿ ಮಾರ್ಕಂಡೇಯ ಯಲ್ಲಪ್ಪ ಮಂಡಿಸಿದ ‘ಶಿವಶರಣ ಡೋಹರ ಕಕ್ಕಯ್ಯ: ಒಂದು ಅಧ್ಯಯನ’ ಮಹಾಪ್ರಬಂಧ‌ಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿಗೆ ಅಂಗೀಕರಿಸಿದೆ. ಇಳಿ ವಯಸ್ಸಿನಲ್ಲೂ ದೊಡಮನಿ ಅವರು 18 ವರ್ಷ ಅಧ್ಯಯನ ನಡೆಸಿದ್ದಾರೆ.

2006 ನವೆಂಬರ್‌ನಲ್ಲಿ ಪಿಎಚ್‌.ಡಿ ಅಧ್ಯಯನಕ್ಕೆ ಮಾರ್ಕಂಡೇಯ ಅವರು ನೋಂದಣಿ ಮಾಡಿಸಿದರು. ಆದರೆ, ಮಾರ್ಗದರ್ಶಕರಾಗಿದ್ದ ಕರ್ನಾಟಕ ಕಾಲೇಜಿನ ಪ್ರೊ.ತಳವಾರ ನಿಧನರಾದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್‌.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಎನ್‌.ಹಳ್ಳಿ (ನಿಂಗಪ್ಪ ಮುದೇನೂರು) ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮುಂದುವರಿಸಿದರು.

ಮಾರ್ಕಂಡೇಯ ಅವರು ಮಹಾಪ್ರಬಂಧ ಸಿದ್ಧಪಡಿಸಿ ಕಳೆದ ವರ್ಷ ನವೆಂಬರ್‌ 9ರಂದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. ಮೌಖಿಕ ಪರೀಕ್ಷೆ ಈಚೆಗೆ ನಡೆದು, ಫೆಬ್ರುವರಿ 8ರಂದು ಪದವಿಗೆ ಅಂಗೀಕರಿಸಲಾಯಿತು.

ಮಾರ್ಕಂಡೇಯ ಅವರ ಕುಟುಂಬದಲ್ಲಿ ಮೊದಲ ತಲೆಮಾರಿನ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು. ಬಡತನವನ್ನು ಹೋಗಲಾಡಿಸಲು ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಶಾಲೆಗೆ ಸೇರಿದ್ದರು. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಶಿಕ್ಷಕರಾಗಿ ನೇಮಕಗೊಂಡರು.

ಆರ್ಥಿಕವಾಗಿ ಬಡ ಕುಟುಂಬದಿಂದ ಬಂದ ಅವರು ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಮುಂದೆ ಓದಲು ಸಾಧ್ಯವಾಗುತ್ತಿರಲಿಲ್ಲ, ಶಿಕ್ಷಕರಾಗುವುದು ದೊಡ್ಡ ವಿಷಯವಲ್ಲ ಎಂದು ಹಲವರು ಟೀಕಿಸಿದ್ದರು. ಲೇವಡಿ ಮಾಡಿದ್ದರು. ಈ ಎಲ್ಲಾ ಟೀಕೆಗಳು ಉನ್ನತ ಶಿಕ್ಷಣವನ್ನು ಮುಂದುವರಿಸುವ ಅವರ ಸಂಕಲ್ಪ ಮತ್ತಷ್ಟು ಬಲಗೊಳ್ಳುವಂತೆ ಮಾಡಿತ್ತು.

‘ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ನನಗೆ ನಂತರ ಧಾರವಾಡಕ್ಕೆ ವರ್ಗಾವಣೆಯಾಯಿತು. ಧಾರವಾಡದಲ್ಲಿ ಪಿಯುಸಿ, ಬಿ.ಎ, ಎಂ.ಎ, ಬಿ.ಇಡಿ ಅಧ್ಯಯನ ಮಾಡಿದೆ. ಡಯೆಟ್‌ ಪ್ರಶಿಕ್ಷಕನಾಗಿ ಕಾರ್ಯನಿರ್ವಹಿಸಿ 1994ರಲ್ಲಿ ನಿವೃತ್ತನಾದೆ. ಈವರೆಗೆ 26 ಕೃತಿಗಳನ್ನು ಬರೆದಿದ್ದೇನೆ. ‘ಸಮಗಾರ ಹರಳಯ್ಯ’ ಕುರಿತು ಪತ್ರಿಕೆಯೊಂದನ್ನು ನಿರ್ವಹಿಸುತ್ತಿದ್ದೇನೆಂದು ದೊಡ್ಡಮನಿ ಹೇಳಿದ್ದಾರೆ.

18 ವರ್ಷಗಳಿಂದ ದಣಿವರಿಯದೆ ಸಂಶೋಧನೆ ನಡೆಸಿದ್ದಾರೆ. ಕೊನೆಯೂ ಅವರ ಗುರಿಯನ್ನು ಸಾಧಿಸಿದ್ದಾರೆ. ಅವರ ಈ ಸಾಧನೆಗೆ ಸಂತಸವಿದೆ. ಇದೀಗ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಮಾಜದ ಮುಖಂಡರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ನಾವು ಕುಟುಂಬವಾಗಿ ಅವರ ಬೆಂಬಲಕ್ಕೆ ನಿಂತಿದ್ದೇವೆ ಮತ್ತು ನಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡಿದ್ದೇವೆಂದು ದೊಡ್ಡಮನಿಯವರ ಪತ್ನಿ ಸುಶೀಲಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com