7,500 ಎಕರೆ ಅರಣ್ಯ ಭೂಮಿ ಮರುವಶಕ್ಕೆ ಸಿದ್ಧತೆ: ಸಚಿವ ಈಶ್ವರ್ ಖಂಡ್ರೆ

ಸ್ವಾತಂತ್ರ್ಯ ಪೂರ್ವದಲ್ಲಿ ಗುತ್ತಿಗೆ​ಗೆ ನೀಡಲಾಗಿದ್ದ ಅರಣ್ಯ ಭೂಮಿಯನ್ನು ವಾಪಸ್ ಪಡೆಯಲಾಗುವುದು" ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶನಿವಾರ ಹೇಳಿದರು.
ಸಚಿವ ಈಶ್ವರ ಖಂಡ್ರೆ
ಸಚಿವ ಈಶ್ವರ ಖಂಡ್ರೆ
Updated on

ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿ ಗುತ್ತಿಗೆ​ಗೆ ನೀಡಲಾಗಿದ್ದ ಅರಣ್ಯ ಭೂಮಿಯನ್ನು ವಾಪಸ್ ಪಡೆಯಲಾಗುವುದು" ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಶನಿವಾರ ಹೇಳಿದರು.

ಮೈಸೂರಿನ ಅರಣ್ಯ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರಣ್ಯ ಭೂಮಿಯನ್ನು 99 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ. ಗುತ್ತಿಗೆ ಅವಧಿ ಮುಗಿದಿದ್ದರೂ ಗುತ್ತಿಗೆದಾರರು ಸರಕಾರಕ್ಕೆ ಭೂಮಿಯನ್ನು ವಾಪಸ್ ನೀಡಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪಿಸಿಸಿಎಫ್ ಬಿ.ಪಿ.ರವಿ ಅವರು ಗುತ್ತಿಗೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಭೂಮಿ ವಾಪಸ್ ನೀಡುವಂತೆ ಈ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದ್ದರು.

ಗುತ್ತಿಗೆದಾರರು ಭೂಮಿ ವಾಪಸ್ ಕೊಡುವ ಬದಲು 99 ವರ್ಷಗಳಲ್ಲ, 999 ವರ್ಷಕ್ಕೆ ಗುತ್ತಿಗೆ ಪಡೆಯಲಾಗಿದೆ ಎಂದು ಹೇಳಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮೊರೆ ಹೋಗಿ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಗುತ್ತಿಗೆದಾರರು ಸರಕಾರಕ್ಕೆ ನೂರಾರು ಕೋಟಿ ತೆರಿಗೆ ಪಾವತಿಸಿಲ್ಲ ಇತ್ತೀಚೆಗೆ ಈ ಬಗ್ಗೆ ಮಾಹಿತಿ ತಿಳಿದುಕೊಂಡು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಹೋರಾಟ ಹಾಗೂ ಅರಣ್ಯ ಭೂಮಿಯನ್ನು ವಾಪಸ್ ಪಡೆಯಲು ಬಿ.ಪಿ.ರವಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ.

ಇದಕ್ಕಾಗಿ ಇಬ್ಬರು ಹಿರಿಯ ವಕೀಲರನ್ನು ನೇಮಿಸಿಕೊಂಡಿದ್ದೇವೆ. ಅಡ್ವೊಕೇಟ್ ಜನರಲ್ ಜೊತೆ ಕೂಡ ಚರ್ಚೆ ನಡೆಸಿದ್ದೇನೆ. ವಿಚಾರಣೆಗಳನ್ನು ನಡೆಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಆರು ತಿಂಗಳೊಳಗೆ ವಿವಾದಗಳನ್ನು ಪರಿಹರಿಸಿ ಎಂದು ಹೇಳಿದ್ದೇನೆ.

ಭೂಮಿ ಸ್ವಾಧೀನಪಡಿಸಿಕೊಂಡ ನಂತರ, ಕಾಡು ಪ್ರಾಣಿಗಳಿಗೆ ಹೆಚ್ಚಿನ ಸ್ಥಳಾವಕಾಶ ದೊರೆಯುತ್ತದೆ. ಇದರಿಂದ ಮನುಷ್ಯ-ಪ್ರಾಣಿ ಸಂಘರ್ಷಗಳೂ ಕೂಡ ಕಡಿಮೆಯಾಗುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯವಾಗಿದೆ. ಹೀಗಾಗಿ ಬೆಳೆ ಹಾನಿ ಆಗದಂತೆ ಮತ್ತು ಜೀವ ಹಾನಿ ಆಗದ ರೀತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಜೊತೆಗೆ ಅರಣ್ಯ ವಿಸ್ತರಣೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಹಸಿರು ಅರಣ್ಯೀಕರಣ ವಲಯದ ಒಂದೆ ಸರ್ವೇ ನಂಬರ್​ನಲ್ಲಿ ಅರಣ್ಯ ಭೂಮಿ, ಕೃಷಿ ಹಾಗೂ ವಾಸಸ್ಥಾನವು ಇರುವುದರಿಂದ ಅನೇಕ ತೊಂದರೆಗಳು ಎದುರಾಗುತ್ತಿವೆ. ಇದರ ನಿವಾರಣೆಗೆ ಜಂಟಿ ಸರ್ವೇ ನಡೆಸಿ, ಅರಣ್ಯ ಸಂಪತ್ತು ಗಡಿ ನಿಗದಿಪಡಿಸಲು 6 ತಿಂಗಳ ಗಡುವು ನೀಡಲಾಗಿದೆ. ಬಹುತೇಕ ಕಡೆಗಳಲ್ಲಿ ಕಂದಾಯ ಗ್ರಾಮ, ಅರಣ್ಯ ಭೂಮಿ ಹಾಗೂ ಖಾಸಗಿ ಭೂಮಿಗಳ ವಿಂಗಡಿಸುವುದು ಬಹುದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಅಂತಹ ಪ್ರದೇಶಗಳಲ್ಲಿ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ನಡೆಸಿ ಆಯಾ ಭೂಮಿಯನ್ನು ಕಾನೂನು ರೀತಿ ವಿಂಗಡಿಸುವಂತೆ ಸೂಚಿಸಲಾಗಿದೆ" ಎಂದರು.

ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅಧಿಕೃತ ವರದಿ ಇದೆ. ಆದರೆ, ಇನ್ನೂ ಹೆಚ್ಚಿನ ಒತ್ತುವರಿ ಆಗಿರುವ ಬಗ್ಗೆ ದೂರುಗಳಿದ್ದು, ಒತ್ತುವರಿಯ ನಿಖರ ಮಾಹಿತಿ ನೀಡುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಸ್ವಾರ್ಥಕ್ಕಾಗಿ ಹತ್ತಾರು ಎಕರೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು. ಒತ್ತುವರಿ ತೆರವು ಮಾಡಲಾಗುವುದು ಎಂದು ಹೇಳಿದರು

ಬಂಡೀಪುರ ಅರಣ್ಯ ಪ್ರದೇಶ ವನ್ಯ ಜೀವಿಗಳ ಆವಾಸಸ್ಥಾನವಾಗಿದ್ದು, ಇಲ್ಲಿ ಕಾಡುಪ್ರಾಣಿಗಳ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು. ಬಂಡೀಪುರ ಅರಣ್ಯದೊಳಗೆ ಇರುವ ರಸ್ತೆ ಮಾರ್ಗವಾಗಿ ಕೇರಳಕ್ಕೆ ಹೋಗಲು ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ಅವಕಾಶ ನೀಡಲಾಗಿದೆ. ರಾತ್ರಿ ಸಂಚಾರಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಇದು ಮುಂದುವರಿಯುತ್ತದೆ. ಕೆಲವು ವಿಶೇಷ ಸಂದರ್ಭ ಅಂದರೆ ವೈದ್ಯಕೀಯ ತುರ್ತು ಇತ್ಯಾದಿ ಸಂದರ್ಭದಲ್ಲಿ ಪರಿಶೀಲಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com