ಕೆಸಿ ವ್ಯಾಲಿ-ಎಚ್‌ಎನ್ ವ್ಯಾಲಿ: 3 ಹಂತದ ಸಂಸ್ಕರಿತ ನೀರು ಹರಿಸಲು ಸರ್ಕಾರಕ್ಕೆ ಸೂಚಿಸಿ: ರಾಜ್ಯಪಾಲರಿಗೆ ರೈತ ಮುಖಂಡರ ಮನವಿ

ರಾಜಧಾನಿಯ ತ್ಯಾಜ್ಯನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಮುನ್ನ ಕಡ್ಡಾಯವಾಗಿ 3 ಹಂತದ ಸಂಸ್ಕರಣೆಗೆ ಒಳಪಡಿಸಿದ ಬಳಿಕವಷ್ಟೇ ಹರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌

ಬೆಂಗಳೂರು: ರಾಜಧಾನಿಯ ತ್ಯಾಜ್ಯನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಮುನ್ನ ಕಡ್ಡಾಯವಾಗಿ 3 ಹಂತದ ಸಂಸ್ಕರಣೆಗೆ ಒಳಪಡಿಸಿದ ಬಳಿಕವಷ್ಟೇ ಹರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ನೇತೃತ್ವದ ನಿಯೋಗವು ಶನಿವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿತು.

ಇಡೀ ರಾಜ್ಯದಲ್ಲೇ ಶಾಶ್ವತ ಬರಪೀಡಿತ ಜಿಲ್ಲೆಗಳೆಂದು ಹಣೆಪಟ್ಟಿ ಹೊಂದಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಇದರಿಂದ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ತತ್ವಾರ ಇದೆ. ಅಂತರ್ಜಲದಲ್ಲಿ ಫ್ಲೋರೈಡ್​​, ನೈಟ್ರೇಟ್​​ ಜತೆಗೆ ಯುರೇನಿಯಂ ಹಾಗೂ ಆರ್ಸೆನಿಕ್​ ಅಂತಹ ವಿಷಕಾರಿ ಅಂಶಗಳು ಸೇರಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉದ್ಭವಿಸಿದೆ. ಹೀಗಿದ್ದರೂ, ಸರ್ಕಾರ ತ್ಯಾಜ್ಯನೀರನ್ನು 3 ಹಂತದಲ್ಲಿ ಸಂಸ್ಕರಿಸದೆ ಹಾಗೆಯೇ ಹರಿಯಬಿಟ್ಟಿರುವುರಿಂದ ವಿವಿಧ ಸಮಸ್ಯೆಗಳು ಉದ್ಭವಿಸಿದೆ. ಇದನ್ನು ಪರಿಗಣಿಸಿ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ನಿಯೋಗವು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿತು.

ರಾಜ್ಯ ಪಾಲರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಅವರು, ರಾಜ್ಯಪಾಲರು ನಮ್ಮ ಮನವಿ ಪತ್ರ ಸ್ವೀಕರಿಸಿ ಮೂರು ಜಿಲ್ಲೆಯ ಜನರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರು ವಿಚಾರವಾಗಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆ ಗಮನಿಸಿ ಸರ್ಕಾರಕ್ಕೆ ಕೆಲವೊಂದು ಸಲಹೆ-ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಬಿಡಬ್ಲ್ಯುಎಸ್‌ಎಸ್‌ಬಿಯ ನೀರು ಜಲಮೂಲ ಮತ್ತು ಅಂತರ್ಜಲವನ್ನು ಕಲುಷಿತಗೊಳಿಸಿ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ರೈತರು ಶೀಘ್ರದಲ್ಲೇ ಸಿದ್ದರಾಮಯ್ಯ ಅವರನ್ನು “ವಿಷ ರಾಮಯ್ಯ” ಎಂದು ಕರೆಯುವ ಸಾಧ್ಯತೆಗಳಿವೆ.

ರಾಜಧಾನಿಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯನೀರು ಸಂಸ್ಕರಿಸಿ ಕೆ.ಸಿ.ವ್ಯಾಲಿ ಹಾಗೂ ಎಚ್‌ಎನ್ ವ್ಯಾಲಿ ಯೋಜನೆ ಮೂಲಕ ಮೂರು ಜಿಲ್ಲೆಗಳ ಹಲವು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದರಿಂದ ಇತ್ತೀಚಿಗೆ ಅಂತರ್ಜಲ ಮಟ್ಟ ಸ್ವಲ್ಪ ಸುಧಾರಿಸಿದ್ದರೂ, ಸಂಪೂರ್ಣವಾಗಿ ಸಂಸ್ಕರಿಸದೆ ಹಾಗೆಯೇ ನೀರು ಹರಿಸುತ್ತಿರುವುದರಿಂದ ಹೊಸ ಸಮಸ್ಯೆಗಳು ಉಂಟಾಗಿವೆ. ಮುಖ್ಯವಾಗಿ ನೀರು ತುಂಬಿಸಿರುವ ಕೆರೆಗಳಲ್ಲಿನ ಮಲೀನ ನೀರನ್ನು ಜಾನುವಾರುಗಳು ಕುಡಿಯುತ್ತಿಲ್ಲ. ಜನರು ಕೂಡ ಕುಡಿಯುವ ಉದ್ದೇಶಕ್ಕೆ ಬಳಸದಂತಾಗಿದೆ. ಜತೆಗೆ ಕೃಷಿ ಚಟುವಟಿಕೆಗೂ ಪೂರಕವಾಗಿಲ್ಲ.

2013ರಲ್ಲೇ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ರೂಪಿಸಿರುವ ಕೊಳಚೆ ಹಾಗೂ ಒಳಚರಂಡಿ ಸಂಸ್ಕರಣಾ ವ್ಯವಸ್ಥೆಗಳ ಕೈಪಿಡಿಯಲ್ಲಿ ಅಡಕಗೊಂಡಿರುವ ಮಾರ್ಗಸೂಚಿಯಂತೆ ತ್ಯಾಜ್ಯನೀರನ್ನು ಕಡ್ಡಾಯವಾಗಿ 3 ಹಂತದಲ್ಲಿ ಸಂಸ್ಕರಿಸಿದ ನಂತರವಷ್ಟೇ ಬಳಕೆಗೆ ಹರಿಸಬೇಕಿದೆ. ಆದರೆ, ಪ್ರಸ್ತುತ ಎರಡು ಹಂತದ ಸಂಸ್ಕರಣೆ ಮಾತ್ರ ನಡೆದಿದ್ದು, ಮೂರನೇ ಹಂತದ ಸಂಸ್ಕರಣೆಗೆ ಬೇಕಾದ ಸಲಕರಣೆ ಹಾಗೂ ಇತ್ಯಾದಿ ಕಾರ್ಯಕ್ಕೆ ಸದ್ಯದಲ್ಲೇ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com