ಶ್ರೀರಾಮನಿಗೆ ಅವಹೇಳನ: ಮಂಗಳೂರಿನ ಸಂತ ಜೆರೋಸಾ ಶಾಲಾ ಶಿಕ್ಷಕಿ ಅಮಾನತು
ಮಂಗಳೂರು: ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪ ಸಂಬಂಧ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.
ಹಿಂದೂಗಳ ಅಸ್ಮಿತೆ ಶ್ರೀರಾಮನ ಅವಹೇಳನ ಖಂಡಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಇಂದು ಪೋಷಕರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಆಡಳಿತ ಮಂಡಳಿ ಸದಸ್ಯರು, ತನಿಖೆ ಪೂರ್ಣಗೊಳ್ಳುವವರೆಗೂ ಶಿಕ್ಷಕಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ.
ಶಾಲೆಯ ಏಳನೇ ತರಗತಿ ಶಿಕ್ಷಕಿ ಪ್ರಭಾ ವಿರುದ್ಧ ಧರ್ಮ ನಿಂದನೆಯ ಕಿಚ್ಚು ಜೋರಾಗಿದ್ದು, ಶಾಲೆಯ ಮುಂಭಾಗ ನೂರಾರು ಸಂಖ್ಯೆಯಲ್ಲಿ ಪೋಷಕರು, ಹಿಂದೂ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಪೋಷಕರೊಂದಿಗೆ ಶಾಸಕ ವೇದವ್ಯಾಸ್ ಕಾಮತ್ ಕೂಡ ಆಗಮಿಸಿದ್ದು, ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಈ ವೇಳೆ ಪೊಲೀಸರು ಶಾಲೆ ಗೇಟ್ ಮುಂಭಾಗ ಶಾಸಕ ಹಾಗೂ ಪೋಷಕರನ್ನು ತಡೆದಿದ್ದರು.
ಆಡಳಿತ ಮಂಡಳಿಯ ಸದಸ್ಯರು ಅಧಿಕೃತವಾಗಿ ಲಿಖಿತವಾಗಿ ಶಾಲೆಯ ಲೆಟರ್ ಹೆಡ್ನಲ್ಲಿ ಶಿಕ್ಷಕಿಯನ್ನು ಅಮಾನತ್ತು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದರು. ಮುಂದೆ ಶಿಕ್ಷಣ ಇಲಾಖೆ ಪ್ರಕರಣದ ಆಂತರಿಕ ತನಿಖೆ ನಡೆಸಲಿದೆ. ಶಿಕ್ಷಣ ಇಲಾಖೆ ತನಿಖಾ ವರದಿ ಆಧಾರದ ಮೇಲೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಫೆಬ್ರವರಿ 8ರಂದು ‘Work is worship’ ಎಂಬ ವಿಷಯ ಬಗ್ಗೆ ಪಾಠ ಮಾಡಿದ್ದ ಶಿಕ್ಷಕಿ ಸಿಸ್ಟರ್ ಪ್ರಭಾ ಅಯೋಧ್ಯೆ ರಾಮಮಂದಿರ ಹಾಗೂ ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರು. ನಂತರ ಪೋಷಕರು ಮತ್ತು ಹಿಂದೂ ಕಾರ್ಯಕರ್ತರು ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ