ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪರಿಷತ್‌ ಉಪಚುನಾವಣೆ: ಮದ್ಯ ಮಾರಾಟ ನಿಷೇಧ ಕುರಿತ ಡಿಸಿ ಕ್ರಮ ಮೇಲ್ನೋಟಕ್ಕೆ ಸೂಕ್ತವಲ್ಲ; ಹೈಕೋರ್ಟ್‌

ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯು ಫೆಬ್ರವರಿ 16ಕ್ಕೆ ನಿಗದಿಯಾಗಿದ್ದು, ಮತದಾನಕ್ಕೂ ಮುನ್ನ 48 ಗಂಟೆಗಳ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಮಾಡಿರುವ ಜಿಲ್ಲಾಧಿಕಾರಿ ಕ್ರಮ ಮೇಲ್ನೋಟಕ್ಕೆ ಸೂಕ್ತವಾಗಿಲ್ಲ ಎಂದು ಹೈಕೋರ್ಟ್‌ ಮಂಗಳವಾರ ಹೇಳಿದೆ.
Published on

ಬೆಂಗಳೂರು: ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯು ಫೆಬ್ರವರಿ 16ಕ್ಕೆ ನಿಗದಿಯಾಗಿದ್ದು, ಮತದಾನಕ್ಕೂ ಮುನ್ನ 48 ಗಂಟೆಗಳ ಅವಧಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಮಾಡಿರುವ ಜಿಲ್ಲಾಧಿಕಾರಿ ಕ್ರಮ ಮೇಲ್ನೋಟಕ್ಕೆ ಸೂಕ್ತವಾಗಿಲ್ಲ ಎಂದು ಹೈಕೋರ್ಟ್‌ ಮಂಗಳವಾರ ಹೇಳಿದೆ.

ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಫೆಬ್ರವರಿ 1ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘಟನೆಯ ಕಾರ್ಯದರ್ಶಿ ವೀರೇಂದ್ರ ಎನ್‌.ಕಾಮತ್‌ ಸೇರಿದಂತೆ ಒಟ್ಟು ನಾಲ್ವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು “ಉಪಚುನಾವಣೆಯು ಸಾರ್ವತ್ರಿಕ ಚುನಾವಣೆಯಲ್ಲ. ಇದರಲ್ಲಿ ಕೇವಲ 16 ಸಾವಿರ ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಹೀಗಾಗಿ, 48 ಗಂಟೆಗಳ ಅವಧಿಯವರೆಗೆ ಮದ್ಯ ಮಾರಾಟ ನಿಷೇಧಿಸಿದರೆ ವರ್ತಕರು, ಉದ್ದಿಮೆದಾರರು ಸಾಕಷ್ಟು ತೊಂದರೆ ಅನುಭವಿಸಲಿದ್ದಾರೆ” ಎಂದು ವಿವರಿಸಿದರು.

“ಪರಿಷತ್‌ ಚುನಾವಣೆಯಲ್ಲಿ ಬಾಂಬೆ ಹೈಕೋರ್ಟ್ ಇಂತಹ ನಿಷೇಧದ ಅವಧಿಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ಪೂರ್ವನಿದರ್ಶನದ ತೀರ್ಪಿದೆ. ಹೀಗಾಗಿ, ಈ ಪ್ರಕರಣದಲ್ಲೂ ಕೇವಲ ಮತದಾನದ ದಿನದಂದು ಮಾತ್ರವೇ ನಿಷೇಧ ಅನ್ವಯಿಸಲು ನಿರ್ದೇಶಿಸಬೇಕು. ಅರ್ಜಿದಾರರು ಎಂದಿನಿಂತೆ ಉಳಿದ ಅವಧಿಯಲ್ಲಿ ಚಿಲ್ಲರೆ, ಸಗಟು ವ್ಯಾಪಾರ, ಹೋಟೆಲ್‌, ಬಾರ್ ಅಂಡ್‌ ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು” ಎಂದು ಕೋರಿದರು.

ಇದಕ್ಕೆ ಪೀಠವು “ಈ ಕುರಿತಂತೆ ಕಾನೂನು ಏನು ಹೇಳುತ್ತದೆ ಎಂಬುದನ್ನು ವಿವರಿಸಿ” ಎಂದು ಸರ್ಕಾರದ ಪರ ವಕೀಲೆ ಸಾವಿತ್ರಮ್ಮ ಅವರಿಗೆ ಸೂಚಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com