ರಾಮಭಕ್ತರಿದ್ದ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ: ಮುಸ್ಲಿಂ ಯುವಕನ ಬಂಧನ. ದರ್ಶನ್ ಬಳಿ ಕ್ಷಮೆ ಕೇಳಿದ ಕನ್ನಡ ಶಫಿ. ಈ ದಿನದ ಸುದ್ದಿ ಮುಖ್ಯಾಂಶಗಳು: 23-02-24

ರಾಮಭಕ್ತರಿದ್ದ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ: ಮುಸ್ಲಿಂ ಯುವಕನ ಬಂಧನ. ದರ್ಶನ್ ಬಳಿ ಕ್ಷಮೆ ಕೇಳಿದ ಕನ್ನಡ ಶಫಿ. ಈ ದಿನದ ಸುದ್ದಿ ಮುಖ್ಯಾಂಶಗಳು: 23-02-24

ಕೇಂದ್ರದ ತೆರಿಗೆ ಹಂಚಿಕೆ ವಿರುದ್ಧ ರಾಜ್ಯ ಸರ್ಕಾರ ನಿರ್ಣಯವನ್ನು ಅಂಗೀಕರಿಸಿದ್ದರ ವಿರುದ್ಧ ಬಿಜೆಪಿ ಕಿಡಿ

ಕೇಂದ್ರದ ತೆರಿಗೆ ಹಂಚಿಕೆ ವಿರುದ್ಧ ರಾಜ್ಯ ಸರ್ಕಾರ ನಿರ್ಣಯವನ್ನು ಅಂಗೀಕರಿಸಿದ್ದರ ವಿರುದ್ಧ ಬಿಜೆಪಿ ಕಿಡಿಕಾರಿದೆ. ಕೇವಲ ತಮ್ಮ ಅಜೆಂಡಾವನ್ನು ಪ್ರಚಾರ ಮಾಡಿಕೊಳ್ಳಲು ಯತ್ನಿಸುತ್ತಿದ್ದು ಕಾಂಗ್ರೆಸ್ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದೆ. ಅಷ್ಟೆ ಅಲ್ಲದೆ ಇಂದು ಸದನದಿಂದ ಹೊರನಡೆದು ಪ್ರತಿಭಟನೆ ನಡೆಸಿದೆ. ಇನ್ನು ಬಿಜೆಪಿಗರು ಸಭಾತ್ಯಾಗ ಮಾಡಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು. ಸದನದಿಂದ ಹೊರನಡೆದಿರುವುದು ಪಕ್ಷಕ್ಕೆ ರಾಜ್ಯದ ಅಥವಾ ರೈತರ ಹಿತದ ಬಗ್ಗೆ ಕಾಳಜಿಯಿಲ್ಲ ಎಂದು ತೋರಿಸುತ್ತದೆ ಎಂದು ಹೇಳಿದರು. ನಾಗರಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಸಮಾನ ಮತ್ತು ತಾರತಮ್ಯರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯಲ್ಲಿ ದೃಢವಾದ ನಿಲುವನ್ನು ಅಳವಡಿಸಿಕೊಳ್ಳಬೇಕು. ಎಲ್ಲಾ ಪ್ರದೇಶಗಳಿಗೂ ತಾರತಮ್ಯವಿಲ್ಲದೆ ಸಮಾನವಾದ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯಾಗಬೇಕು. ವಿಶೇಷವಾಗಿ, ಕರ್ನಾಟಕದ ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ಯಾವುದೇ ಅನ್ಯಾಯಕ್ಕೆ ಎಡೆಮಾಡಿಕೊಡಬಾರದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅಯೋಧ್ಯೆಯಿಂದ ವಾಪಸಾಗುತ್ತಿದ್ದ ಯಾತ್ರಿಕರಿದ್ದ ಅಯೋಧ್ಯೆ ವಿಶೇಷ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ: ಓರ್ವನ ಬಂಧನ

ಅಯೋಧ್ಯೆಯಿಂದ ವಾಪಸಾಗುತ್ತಿದ್ದ ಯಾತ್ರಿಕರಿದ್ದ ಅಯೋಧ್ಯೆ ವಿಶೇಷ ರೈಲಿಗೆ ಬೆಂಕಿ ಹಚ್ಚುವುದಾಗಿ ಅನ್ಯಕೋಮಿನ ಯುವಕ ಬೆದರಿಕೆ ಹಾಕಿರುವ ಘಟನೆ ವಿಜಯಪುರದ ಹೊಸಪೇಟೆಯ ರೈಲ್ವೆ ನಿಲ್ದಾಣದಲ್ಲಿ ನಡೆದಿತ್ತು. ರೈಲಿಗೆ ನುಗ್ಗಿದ ಮೂವರು ಯುವಕರು ಆಕ್ಷೇಪಾರ್ಹ ಹೇಳಿಕೆಯಿಂದ ಶ್ರೀರಾಮ ಭಕ್ತರು ಕೆರಳಿದ್ದು ಅವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದರು. ಕೂಡಲೇ ಸ್ಥಳಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು, ಹೊಸಪೇಟೆಯ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಆಗಮಿಸಿ ಭಕ್ತರ ಮನವೊಲಿಸಿದರು. ಪ್ರತಿಭಟನೆಯಿಂದಾಗಿ ರೈಲು 2 ಗಂಟೆ ತಡವಾಗಿ ಹೊರಟಿತು. ಪ್ರಕರಣ ಸಂಬಂಧ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಅಲ್ಲದೆ ಓರ್ವ ಆರೋಪಿಯನ್ನು ಗದಗದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು

ನಿರ್ಮಾಪಕ ಉಮಾಪತಿ ಬಗ್ಗೆ ದರ್ಶನ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದ ಕನ್ನಡ ಪರ ಸಂಘಟನೆಯ ಕನ್ನಡ ಶಫಿ ಎನ್ನುವವರು ಇದೀಗ ವಾಣಿಜ್ಯ ಮಂಡಳಿಗೆ ನೀಡಿದ್ದ ದೂರನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ. ನಟ ದರ್ಶನ್​ ನಿರ್ಮಾಪಕ ಉಮಾಪತಿ ಬಗ್ಗೆ ಬಳಸಿದ್ದ ಭಾಷೆ ಮುಜುಗರ ತಂದಿತ್ತು. ಹೀಗಾಗಿ ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದೇವು. ಚಿತ್ರರಂಗದಲ್ಲಿ ಬೆಳೆದು ನಿಂತಿರುವ ಹಿರಿಯ ನಟನಿಗೆ ಇದರಿಂದ ನೋವಾಗಿದ್ದರೆ ನಮ್ಮ ಸಂಘಟನೆಗಳ ಪರವಾಗಿ ಕನ್ನಡದ ಮನಸ್ಸುಗಳಿಗೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ನಿರ್ಮಾಪಕ ಉಮಾಪತಿ ಕುರಿತು ಅಸಂಬದ್ಧ ಪದ ಬಳಕೆ ಮಾಡಿದ್ದಲ್ಲದೆ ಮಹಿಳೆಯರ ಬಗ್ಗೆಯೂ ಹಗುರವಾಗು ಮಾತನಾಡಿದ್ದಾರೆ ಎಂದು ಆರೋಪಿಸಿ ಶ್ರೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘದ 35ಕ್ಕೂ ಮಹಿಳೆಯರು ದರ್ಶನ್ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೆಜೆಸ್ಟಿಕ್‌ನಿಂದ ಗರುಡಾಚಾರ್‌ಪಾಳ್ಯ ನಡುವೆ 3 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಓಡಾಟ

ಮೆಜೆಸ್ಟಿಕ್‌ನಿಂದ ಗರುಡಾಚಾರ್‌ಪಾಳ್ಯ ನಡುವಿನ ಜನ ದಟ್ಟನೆಯನ್ನು ನಿಯಂತ್ರಿಸುವ ಸಲುವಾಗಿ ನಮ್ಮ ಮೆಟ್ರೋ ಈ ಭಾಗದಲ್ಲಿ 3 ನಿಮಿಷಕ್ಕೊಮ್ಮೆ ಮೆಟ್ರೋ ಸೇವೆ ಒದಗಿಸಲು ಬಿಎಂಆರ್ ಸಿಎಲ್ ಮುಂದಾಗಿದೆ. ಹೆಚ್ಚು ಜನ ದಟ್ಟನೆ ಇರುವ ಪೀಕ್ ಆವರ್​ಗಳಲ್ಲಿ ಪ್ರತಿ‌ ಮೂರು ನಿಮಿಷಕ್ಕೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ. ಸೋಮವಾರದಿಂದ ಬೆಳಿಗ್ಗೆ 8.45 ರಿಂದ 10.20ರವರೆಗೆ ಮೆಜೆಸ್ಟಿಕ್ ಮತ್ತು ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಆರಂಭಿಸಲಿದೆ. ಶನಿವಾರ, ಭಾನುವಾರ ಮತ್ತು ರಜಾದಿನಗಳನ್ನು ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ಈ ಸೇವೆ ಇರಲಿದೆ. ಇದರಿಂದ ಟ್ರಿನಿಟಿ, ಇಂದಿರಾನಗರ, ಬೆನ್ನಿಗಾನಹಳ್ಳಿ ಮತ್ತು ಕೆಆರ್​ಪುರ ಕಡೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ

ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ನಗರದ ನಾಯಂಡಹಳ್ಳಿಯ ಗಂಗೋಂಡನಹಳ್ಳಿಯಲ್ಲಿದ್ದ ಪ್ಲಾಸ್ಟಿಕ್ ಗೋಡೌನ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾಗಿದೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಕೆನ್ನಾಲಿಗೆ ವ್ಯಾಪಿಸಿ ಗೋಡೌನ್ ಪಕ್ಕ ಇರಿಸಿದ್ದ ಮೂವತ್ತಕ್ಕೂ ಹೆಚ್ಚು ಆಟೋಗಳು, ಸರಕುಗಳನ್ನು ಸಾಗಿಸುವ ವಾಹನಗಳು ಸುಟ್ಟು ಹೋಗಿವೆ. ಸುದ್ದಿ ತಿಳಿದು ಕೂಡಲೇ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com