ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ: ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಮತ್ತೊಂದು ಪ್ರಕರಣ: ಈ ದಿನದ ಸುದ್ದಿ ಮುಖ್ಯಾಂಶಗಳು: 25-02-24

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ

ಯಾದಗಿರಿಯ ಸುರಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದಾರೆ. 67 ವರ್ಷದ ವಯಸ್ಸಿನ ರಾಜಾ ವೆಂಕಟಪ್ಪ ನಾಯಕ ಅವರು ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ನಾಲ್ಕು ಬಾರಿ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಕಾಂಗ್ರೆಸ್​ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದರು. ಇನ್ನು ಇತ್ತೀಚಿಗಷ್ಟೆ ರಾಜಾ ವೆಂಕಟಪ್ಪ ನಾಯಕ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ರಾಜಾ ವೆಂಕಟಪ್ಪ ನಾಯಕ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾ ನಿಲಯ್ ವಿಪಿನ್​ಚಂದ್ರ ಅಂಜಾರಿಯ ಪ್ರಮಾಣವಚನ ಸ್ವೀಕಾರ

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ (ಸಿಜೆ) ನಿಲಯ್ ವಿಪಿನ್​ಚಂದ್ರ ಅಂಜಾರಿಯ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಗೌಪ್ಯತಾ ಪ್ರಮಾಣವಚನ ಬೋಧಿಸಿದರು. ನ್ಯಾ. ಅಂಜಾರಿಯ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇತ್ತೀಚೆಗೆ ನೇಮಕ ಮಾಡಲಾಗಿತ್ತು. ಗುಜರಾತ್ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದ ಅವರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಫೆಬ್ರವರಿ ಆರಂಭದಲ್ಲಿ ಶಿಫಾರಸು ಮಾಡಿತ್ತು.

ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಗೆ ಸಿದ್ರಾಮುಲ್ಲಾ ಖಾನ್ ಎಂದು ಟೀಕಿಸಿರುವ ಅನಂತ್ ಕುಮಾರ್ ಹೆಗಡೆ ವಿರುದ್ಧ ಮುಂಡಗೋಡ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿದ್ರಾಮುಲ್ಲಾ ಖಾನ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ರಮುಲ್ಲಾ ಖಾನ್ ಸರ್ಕಾರ ಇದೆ ಎಂದು ಮುಂಡಗೊಡದಲ್ಲಿ ಭಾಷಣ ಮಾಡಿದ್ದರು. ಇದೀಗ ಅವರ ವಿರುದ್ಧ ಸುಮೋಟೋ‌ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನ ಅಯೋಧ್ಯೆ ರಾಮಮಂದಿರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಪ್ರಯೋಗ ಮಾಡಿದ್ದ ಅನಂತಕುಮಾರ್ ಹೆಗಡೆ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ಸಿದ್ದರಾಮಯ್ಯ ವಿರುದ್ಧದ ಲಂಚ ಪ್ರಕರಣವನ್ನು ಸಿಬಿಐಗೆ ವಹಿಸಿ: ಬಿಜೆಪಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಲಂಚ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದು ಪ್ರಕರಣದ ನ್ಯಾಯಯುತ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದರು. ಸಿಎಂ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ವರದಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ತನಿಖೆಯನ್ನು ಮುಂದುವರಿಸುವಂತೆ ಸೂಚಿಸಿದೆ.

ಬೈಕ್ ಓವರ್​ಟೇಕ್ ವಿಚಾರವಾಗಿ ಆರು ಮಂದಿ ತಂಡದಿಂದ ಯುವಕನೊಬ್ಬನ ಬರ್ಬರ ಕೊಲೆ

ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಬೈಕ್ ಓವರ್​ಟೇಕ್ ವಿಚಾರವಾಗಿ ಆರು ಮಂದಿ ತಂಡವೊಂದು ಯುವಕನೊಬ್ಬನ್ನು ಕೊಲೆ ಮಾಡಿದೆ. ಮೃತ ಯುವಕ ಹಳಿಯಾಳ ಮೂಲದ 24 ವರ್ಷದ ಪ್ರಜ್ವಲ್ ಕಕ್ಕೇರಿಕರ ಎಂದು ತಿಳಿದುಬಂದಿದೆ. ಸಾಣಾ ಮರಾಠಿ, ಅನಿಕೆತ್ ಮಿರಾಶಿ, ರಿತೇಶ್ ಪಾಟೀಲ್, ಪಾಂಡುರಂಗ ಕಳಸುರಕರ್, ಪ್ರಶಾಂತ್ ಕಲಸುರಕರ್ ಹಾಗೂ ರೂಪೇಶ್ ತಂಡ ಪ್ರಜ್ವಲ್​​​ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮತ್ತೊಂದೆಡೆ ಚಾಮರಾಜನಗರದ ಮಲೆಮಾದೇಶ್ವರ ಬೆಟ್ಟದಲ್ಲಿ ಕಾರ್ ಪಾರ್ಕಿಂಗ್​ ಮಾಡುತ್ತಿದ್ದಾಗ ಅಪಘಾತ ಸಂಭವಿಸಿ ಏಳು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ತಮಿಳುನಾಡಿನ ಧರ್ಮಪುರಿಯ ಉಳ್ಳಾಂಗ ಕೊಟ್ಟಾಯ ಗ್ರಾಮದ 7 ವರ್ಷದ ಸುಶ್ಮಿತಾ ಮೃತಪಟ್ಟಿದ್ದಾಳೆ. ತಾತ- ಅಜ್ಜಿ ಜೊತೆ ಬಂದಿದ್ದ ಬಾಲಕಿ ಪಾಲಾರ್ ರಸ್ತೆಯ ಪಾರ್ಕಿಂಗ್​​ ನಲ್ಲಿ ಆಟ ಆಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com